ನವದೆಹಲಿ : ತಾಲಿಬಾನಿಗಳು ಬಲಾಗಿದ್ದಾರೆ. ರಕ್ತಪಾತವಿಲ್ಲದೆ ಅಫ್ಘಾನ್ ನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ತಾಲಿಬಾನಿಗಳು ಜಾಣರು ಅನ್ನುವ ಅರ್ಥದಲ್ಲಿ ಕನ್ನಡ ಪತ್ರಿಕೆಯೊಂದು ಸಂಪಾದಕೀಯ ಬರೆದು ಉಗಿಸಿಕೊಂಡಿತ್ತು. ಈ ಮೂಲಕ ತಾಲಿಬಾನಿಗಳ ಉಗ್ರರ ಬಗ್ಗೆ ಜನ ಸಾಫ್ಟ್ ಕಾರ್ನರ್ ತಳೆಯಲಿ ಅನ್ನುವುದು ಆ ಪತ್ರಿಕೆಯ ಉದ್ದೇಶವಾಗಿತ್ತು. ಆದರೆ ಅಫ್ಘಾನ್ ನಲ್ಲಿ ವಾಸ್ತವ ಪರಿಸ್ಥಿತಿಯೇ ಬೇರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ಶಾಂತಿ ಮಂತ್ರದ ನಾಟಕವಾಡಿದ ತಾಲಿಬಾನಿಗಳ ಅಸಲಿ ಮುಖ ಬಯಲಾಗುತ್ತಿದೆ. ಮಾತ್ರವಲ್ಲದೆ ತಾಲಿಬಾನಿಗಳ ಪರ ಬ್ಯಾಟ್ ಬೀಸುತ್ತಿದ್ದ ಪತ್ರಕರ್ತರ ಮೇಲೆಯೇ ಉಗ್ರರು ಹಲ್ಲೆ ನಡೆಸಿದ್ದಾರೆ.
ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನವಾದ ಆಗಸ್ಟ್ 19 ರಂದು ರಾಷ್ಟ್ರ ಧ್ವಜ ಹಾರಿಸಲು ಮುಂದಾದ ನಾಗರಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಇನ್ನು ದೇಶದ ವಿವಿಧ ಪ್ರದೇಶಗಳಲ್ಲಿ ವರದಿಗಾರಿಕೆ ಮಾಡುತ್ತಿದ್ದ ದೇಶ ವಿದೇಶದ ಪತ್ರಕರ್ತರ ಮೇಲೂ ಉಗ್ರರು ದಾಳಿ ಮಾಡಿದ್ದು CNN ಸೇರಿದಂತೆ ಕೆಲ ಅಂತರರಾಷ್ಟ್ರೀಯ ಮಾಧ್ಯಮಗಳ ಮಂದಿ ಗಾಯಗೊಂಡಿದ್ದಾರೆ.
ಕಾಬೂಲ್, ಅಸಾದಾಬಾದ್, ಜಲಾಲಾಬಾದ್ ಸೇರಿ ಅನೇಕ ಪ್ರದೇಶಗಳಲ್ಲಿ ನಾಗರಿಕರ ಮೇಲೆ ತಾಲಿಬಾನಿಗಳು ದೌರ್ಜನ್ಯ ಎಸಗುತ್ತಿದ್ದು, ಹಲವಾರು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಜೊತೆಗೆ ಗುಂಡು ಹಾರಿಸಿದ ಮತ್ತು ಜನ ರಕ್ತದ ಮಡುವಿನಲ್ಲಿರುವ ವಿಡಿಯೋ ಗಳು ಕೂಡಾ ವೈರಲ್ ಆಗಿದೆ.
ಇನ್ನು ಬ್ಯೂಟಿಪಾರ್ಲರ್ ಗಳ ಮೇಲೆ ಉಗ್ರರು ಕೆಂಗಣ್ಣು ಬೀರಿದ್ದು, ಉಗ್ರರ ಭಯದಿಂದ ಬ್ಯೂಟಿ ಪಾರ್ಲರ್ ಸೇರಿದಂತೆ ಅಂಗಡಿಗಳ ಎದುರಿರುವ ಮಹಿಳಾ ರೂಪದರ್ಶಿಗಳ ಫೋಟೋಗಳಿಗೆ ಅಂಗಡಿ ಮಾಲೀಕರೇ ಮಸಿ ಬಳಿಯುತ್ತಿದ್ದಾರೆ.
Discussion about this post