ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ತಪ್ಪಿದ್ದು, ರಾಜ್ಯ ರಾಜಧಾನಿಯಿಂದ ಹಳ್ಳಿಗೆ ಸೋಂಕು ವಲಸೆ ಹೋಗಿದೆ. ಕನಿಷ್ಟ ಪಕ್ಷ ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಚ್ಚೆತ್ತುಕೊಂಡು, ಬೆಂಗಳೂರಿನಿಂದ ಬಂದವರನ್ನು ಕ್ವಾರಂಟೈನ್ ಮಾಡಿ, ಅವರ ಮೇಲೆ 14 ದಿನ ನಿಗಾ ವಹಿಸಿರುತ್ತಿದ್ರೆ ಹಳ್ಳಿಗಳಲ್ಲಿ ಸೋಂಕು ನಿಯಂತ್ರಿಸಬಹುದಿತ್ತು.
ಇನ್ನು ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಅನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಇದು ಮೂಗಿನ ಕೆಳಗೆ ಮಾಸ್ಕ್ ಹಾಕಿದಂತಿದೆ .6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳ ಅಂಗಡಿಗಳ ಜೊತೆಗೆ ಅವಶ್ಯಕತೆ ಇಲ್ಲದ ಅಂಗಡಿಗಳು ಬಾಗಿಲು ತೆರೆದಿರುತ್ತದೆ. ಜೊತೆಗೆ ಅಗತ್ಯವಿಲ್ಲದಿದ್ದರೂ ಜನ ಈ ಹೊತ್ತಲ್ಲಿ ಬೀದಿಗಿಳಿಯುತ್ತಿದ್ದಾರೆ. ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಮದುವೆ, ಗೃಹ ಪ್ರವೇಶ ಸೇರಿದಂತೆ ಅನೇಕ ಕಾರ್ಯಕ್ರಮಗಳು ಕೊರೋನಾ ನಿಯಮಗಳನ್ನು ಮೀರಿ ನಡೆಯುತ್ತಿದೆ. ಪಿಡಿಓಗಳು, ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಕಣ್ಣೀದ್ದು ಕುರುಡಾಗಿದೆ.
ಈ ನಡುವೆ ಕರ್ನಾಟಕದಲ್ಲಿ ಹಿಡಿತ ತಪ್ಪಿ ಹೋಗಿರುವ ಕೊರೋನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ ಎಂಟ್ರಿ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ‘ಸೇವಾ ಹಿ ಸಂಘಟನೆ’ ಸಭೆ ನಡೆಸಿರುವ ಬಿ ಎಲ್ ಸಂತೋಷ್ ಪಕ್ಷ ಸಂಘಟನೆ ಮತ್ತು ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ದಶ ಸೂತ್ರಗಳನ್ನು ಹಂಚಿಕೊಂಡಿದ್ದಾರೆ.
ವರ್ಚುವಲ್ ಮೂಲಕ ಆಯೋಜಿಸಲಾಗಿದ್ದ ಸಭೆಗೆ ರಾಜ್ಯ ಬಿಜೆಪಿ ವಿವಿಧ ಮೋರ್ಚಾಗಳ ಮುಖಂಡರು ಸೇರಿದಂತೆ ಒಟ್ಟು 2 ಸಾವಿರ ಕಾರ್ಯಕರ್ತರನ್ನು ಆಹ್ವಾನಿಸಲಾಗಿತ್ತು. ಎಂಪಿ, ಎಂಎಲ್ಎ ಗಳನ್ನು ಕೂಡಾ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಈ ಸಭೆಗೆ 800ರ ಅಸುಪಾಸಿನ ಸಂಖ್ಯೆ ಕಾರ್ಯಕರ್ತರು ಹಾಜರಾಗಿದ್ದರು.
ಈ ಸಭೆಯಲ್ಲಿ ಮಾತನಾಡಿರುವ ಸಂತೋಷ್ ಜೀ ಒಟ್ಟು ಹತ್ತು ಸೂತ್ರಗಳನ್ನು ಮುಂದಿಟ್ಟಿದ್ದಾರೆ.
- ಕಾರ್ಯಕರ್ತರೇ ಪಕ್ಷದ ಆಸ್ತಿ, ಹೀಗಾಗಿ ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇದಕ್ಕಾಗಿ ಕೊರೋನಾ ನಿಯಮಗಳನ್ನು ಪಾಲಿಸಿ.
- ಸಾಮಾಜಿಕ ಜಾಲತಾಣಗಳ ಮೂಲಕ ಸೇವೆಗೆ ಬನ್ನಿ. ಈ ಮೂಲಕ ಕೊರೋನಾದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ. ಸೇವೆ ಸಂಘಟನೆಗೆ ದೊಡ್ಡ ಶಕ್ತಿಯನ್ನು ತುಂಬುತ್ತದೆ. ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕೂಡಾ ಇದು ಕಾಪಾಡುತ್ತದೆ.
- ಕೊರೋನಾ ಮುಕ್ತ ಕರ್ನಾಟಕದ ಸಂಕಲ್ಪದೊಂದಿಗೆ ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಿ,
- ಈ ವೇಳೆ ಕರ್ನಾಟಕ ಒಂದೇ ಅನ್ನುವುದು ನಿಮ್ಮ ಮಾನದಂಡವಾಗಿರಲಿ.
- ಕೊರೋನಾ ಸೋಂಕಿತರು ಸಂಕಷ್ಟದಲ್ಲಿದ್ರೆ ಅವರಿಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚಿ. ವೈದ್ಯಕೀಯ ಸೇವೆಗಳ ಅಗತ್ಯವಿದ್ರೆ ಅದನ್ನು ಒದಗಿಸಿ.
- ಸ್ಮಶಾನದಲ್ಲಿ ಕಣ್ಣೀರು ಹಾಕುತ್ತಿರುವ ಮಂದಿಯನ್ನು ಸಂತೈಸಿ. ಈ ಮೂಲಕ ಅವರ ನೋವಿನಲ್ಲಿ ನೀವೂ ಭಾಗಿಯಾಗಿ. ಈ ಮೂಲಕ ಅವರಿಗೆ ನೀವು ಹತ್ತಿರವಾಗಿ, ಮುಂದಿನ ದಿನಗಳಲ್ಲಿ ಅವರೇ ನಿಮಗೆ ಹತ್ತಿರವಾಗುತ್ತಾರೆ.
- ಮುಂದೆ ನಾಯಕರಾಗುವವರು ಹಾಗೂ ಈಗಾಗಲೇ ನಾಯಕರಾಗಿರುವವರು ನಿಮ್ಮ ನಿಮ್ಮ ವಾರ್ಡ್ ಗಳಲ್ಲಿ ಐಸೋಲೇಷನ್ ಸೆಂಟರ್ ಗಳನ್ನು ತೆರೆಯಿರಿ. ಹೋಮ್ ಐಸೋಲೇಷನ್ ಆಗಲು ಅಸಾಧ್ಯವಿರುವ ಮಂದಿಗೆ ಈ ಮೂಲಕ ನೆರವಾಗಿ.
- ವ್ಯವಸ್ಥೆ ಅಂದ ಮೇಲೆ ಟೀಕೆಗಳು ಬರುವುದು ಸಹಜ. ಟೀಕೆಗಳನ್ನು ಎಂದಿಗೂ ನೆಗೆಟಿವ್ ದೃಷ್ಟಿಕೋನದಿಂದ ನೋಡಬಾರದು.
- ಪ್ರತೀ ವಾರ್ಡ್ ನಲ್ಲಿ ಕನಿಷ್ಟ 50 ರಕ್ತದಾನಿಗಳನ್ನು ಗುರುತಿಸಿ.
- 45 ವರ್ಷ ಮೇಲ್ಪಟ್ಟವರು ನಿಮ್ಮ ವಾರ್ಡ್ ನಲ್ಲಿದ್ರೆ ಅವರು ಲಸಿಕೆ ಪಡೆಯುವಂತೆ ಪ್ರೇರೇಪಿಸಿ, ಒಂದು ವೇಳೆ ಅವರು ಲಸಿಕಾ ಕೇಂದ್ರಕ್ಕೆ ಹೋಗಲು ಅಸಾಧ್ಯ ಅನ್ನುವುದಾದರೆ ನೀವೇ ಅವರನ್ನು ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆ ಕೊಡಿಸಿ.
1 ಗಂಟೆ 15 ನಿಮಿಷಗಳ ಸಭೆಯಲ್ಲಿ ದಶ ಸೂತ್ರಗಳ ಜೊತೆಗೆ ಮತ್ತಷ್ಟು ಸೂಚನೆಗಳನ್ನು ಬಿಎಲ್ ಸಂತೋಷ್ ಕಾರ್ಯಕರ್ತರಿಗೆ ಕೊಟ್ಟಿದ್ದಾರೆ. ಈ ಮೂಲಕ ನಾವೆಲ್ಲರೂ ಸೋಂಕು ಮುಕ್ತ ಕರ್ನಾಟಕದ ಸಂಕಲ್ಪ ಮಾಡೋಣ. ಜೊತೆಗೆ ಶೀಘ್ರದಲ್ಲೇ ಕರ್ನಾಟಕವನ್ನು ಕೊರೋನಾದ ಬಿಗಿ ಹಿಡಿತದಿಂದ ಮುಕ್ತಿಗೊಳಿಸೋಣ ಅಂದಿದ್ದಾರೆ.
Discussion about this post