ಮಂಗಳೂರು : ನಗರದ ಸುರತ್ಕಲ್ ಜಂಕ್ಷನ್ ಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರು ಇಡಲು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹಾಗೂ ಬಿಜೆಪಿ ಕಾರ್ಪೋರೇಟರುಗಳು ಮುಂದಾಗಿದ್ದಾರೆ. ಈ ಸಂಬಂಧ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಸ್ತಾವನೆ ಬಗ್ಗೆ ಚರ್ಚಿಸಲು ಸ್ಥಾಯಿ ಸಮಿತಿಗೆ ಕಡತವನ್ನು ಮೇಯರ್ ಪ್ರೇಮಾನಂದ ಶೆಟ್ಚಿ ರವಾನಿಸಿದ್ದಾರೆ.
ಆದರೆ ಬಿಜೆಪಿ ಮುಖಂಡರ ಈ ಪ್ರಸ್ತಾಪ ವಿವಾದಕ್ಕೆ ಕಾರಣವಾಗಿದ್ದು, SDPI ತೀವ್ರ ವಿರೋಧ ವ್ಯಕ್ತಪಡಿಸಿದೆ. ಸ್ಥಾಯಿ ಸಮಿತಿ ಸಭೆಯ ಚರ್ಚೆಯಲ್ಲಿ ಪಾಲ್ಗೊಳ್ಳಲು ತಮಗೂ ಅವಕಾಶ ನೀಡಬೇಕು ಎಂದು ಮೇಯರ್ ಅವರಿಗೆ SDPI ಮುಖಂಡರು ಮನವಿ ಸಲ್ಲಿಸಿದ್ದಾರೆ. ಈ ಮನವಿಯ ಬೆನ್ನಲ್ಲೇ ಪಾಲಿಕೆ ಪ್ರತಿಪಕ್ಷ ನಾಯಕ ವಿನಯರಾಜ್ ಕೂಡಾ ಸ್ಥಾಯಿ ಸಮಿತಿಯಲ್ಲಿ ನನಗೂ ಅವಕಾಶ ಕೊಡಿ ಅಂದಿದ್ದಾರೆ.
ಆದರೆ ಈ ಸರ್ಕಲ್ ನಾಮಕರಣ ವಿವಾದದಲ್ಲಿ ಕಾಂಗ್ರೆಸ್ ಅಂತರ ಕಾಪಾಡಿಕೊಂಡಿದೆ. ಶಾಸಕ ಯುಟಿ ಖಾದರ್ ಹೊರತು ಪಡಿಸಿದರೆ ಸುರತ್ಕಲ್ ಭಾಗದ ಅದ್ಯಾವ ಕಾಂಗ್ರೆಸ್ ಮುಖಂಡರೂ ಬಿಜೆಪಿಯ ಪ್ರಸ್ತಾಪದ ವಿರುದ್ಧ ದನಿ ಎತ್ತಿಲ್ಲ. ದನಿ ಎತ್ತಿದ್ರೆ ಮುಂದಿನ ಚುನಾವಣೆಯಲ್ಲಿ ಮತ ಕಳೆದುಕೊಳ್ಳುವ ಭೀತಿ ಇವರದ್ದು. ಖಾದರ್ ಅವರು ಈ ಸರ್ಕಲ್ ಗೆ ಜನಾರ್ಧನ ಪೂಜಾರಿ ಅಥವಾ ಶ್ರೀನಿವಾಸ್ ಮಲ್ಯ ಅವರ ಹೆಸರನ್ನು ಇಡಿ ಎಂದು ಆಗ್ರಹಿಸಿದ್ದಾರೆ.
Discussion about this post