ಬೆಂಗಳೂರು : ಕೊರೋನಾ ಸೋಂಕು ನಿಯತ್ರಣ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಡನರ ಅಸಹಕಾರದ ನಡುವೆಯೂ ಅಧಿಕಾರಿಗಳು ಸೋಂಕು ನಿಯಂತ್ರಿಸಲು ಹರ ಸಾಹಸಪಡುತ್ತಿದ್ದಾರೆ. ಈ ನಡುವೆ ಎರಡನೇ ಅಲೆ ನಿಯಂತ್ರಣ ಬಂದಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಹಾಗಂತ ಆತಂಕ ದೂರವಾಗಿಲ್ಲ.
ಇದೀಗ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದ್ದು, ಶಾಲಾ ಕಾಲೇಜುಗಳ ಸುತ್ತಮುತ್ತಲಿನ ಅಂಗಡಿ, ಹೊಟೇಲ್ ಗಳ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು. ಇಲ್ಲವಾದರೆ ಅಂಗಡಿಗಳನ್ನು ಬಂದ್ ಮಾಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಆರನೇ ತರಗತಿಯಿಂದ ಸ್ನಾತಕೋತ್ತರ ಪದವಿ ತನಕದ ತರಗತಿಗಳು ಪ್ರಾರಂಭಗೊಂಡಿದೆ. ಆದರೆ 18 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಕೊರೋನಾ ಆತಂಕದಲ್ಲಿದ್ದಾರೆ. ದ್ವೀತಿಯ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಲಸಿಕೆ ಪಡೆಯಲು ಸಾಧ್ಯವಿಲ್ಲದ ಕಾರಣ ಅವರೇ ಸೋಂಕಿಗೆ ತುತ್ತಾಗುವ ಭೀತಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ಕಠಿಣ ಕ್ರಮಕ್ಕೆ ಪಾಲಿಕೆ ಮುಂದಾಗಿದೆ.
ಸರ್ವೇ ಸಾಮಾನ್ಯವಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜು ಸಮೀಪದ ಅಂಗಡಿಗಳಿಗೆ ತೆರಳುತ್ತಾರೆ. ಈ ವೇಳೆ ಅಲ್ಲಿನ ಸಿಬ್ಬಂದಿಯಿಂದ ಸೋಂಕು ಹರಡುವ ಸಾಧ್ಯತೆಗಳಿದೆ. ಹೀಗಾಗಿ ಈ ಆದೇಶವನ್ನು ಹೊರಡಿಸಲಾಗಿದೆ. ಜೊತೆಗೆ ಶಾಲಾ ಕಾಲೇಜು ಸುತ್ತಮುತ್ತಲಿನ ಹೊಟೇಲ್ ಅಂಗಡಿ ಮುಂಗಟ್ಟುಗಳ ಸಿಬ್ಬಂದಿ ಲಸಿಕೆ ಪಡೆದಿದ್ದಾರೆಯೇ ಅನ್ನುವುದನ್ನು ಪರಿಶೀಲಿಸಲು ತಂಡಗಳನ್ನು ಕೂಡಾ ರಚಿಸಲಾಗಿದೆ.
ಇನ್ನು ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುತ್ತಿರುವ ಅನೇಕ ಪೋಷಕರು ಲಸಿಕೆ ಪಡೆದಿಲ್ಲ ಅನ್ನುವ ಮಾಹಿತಿ ಲಭ್ಯವಾಗಿದ್ದು, ಇದರಿಂದಲೂ ಮೂರನೇ ಅಲೆ ಸೃಷ್ಟಿಯಾಗುವ ಭಯವಿದೆ. ಪೋಷಕರು ಲಸಿಕೆ ಪಡೆಯದೆ ಸೋಂಕಿಗೆ ತುತ್ತಾದರೆ ಅದು ಮಕ್ಕಳಿಗೂ ಬರುವ ಸಾಧ್ಯತೆಗಳಿದೆ. ಅದೇ ಮಗು ಶಾಲೆಗೆ ಬಂದರೆ ಅದು ವ್ಯಾಪಕವಾಗಿ ಹರಡಬಹುದು. ಹೀಗಾಗಿ ಪೋಷಕರು ಲಸಿಕೆ ಪಡೆದಿರುವ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ.ಒಂದು ವೇಳೆ ಲಸಿಕೆ ಪಡೆದಿಲ್ಲ ಅಂದ್ರೆ ಮನೆಗೆ ತೆರಳಿ ಆರೋಗ್ಯ ಸಿಬ್ಬಂದಿ ಲಸಿಕೆ ಚುಚ್ಚಿ ಬರಲಿದ್ದಾರೆ.
Discussion about this post