ಮಾಲಾಧಾರಿಗಳಿಗೆ 5 ಬಾಟಲಿ ಅರವಣ 5 ಪ್ಯಾಕೆಟ್ ಅಪ್ಪಂ ಖರೀದಿಗೆ ಅವಕಾಶ – ಶಬರಿಮಲೆ
ಇತ್ತೀಚಿನ ದಿನಗಳಲ್ಲಿ ಶಬರಿಮಲೆ ಅಯ್ಯಪ್ಪ ಸನ್ನಿಧಿ ಸದಾ ಸುದ್ದಿಯಲ್ಲಿರುತ್ತದೆ. ಒಂದಲ್ಲ ಒಂದು ಕಾರಣಕ್ಕೆ ಸನ್ನಿಧಾನ ಸುದ್ದಿಯಾಗುತ್ತದೆ. ಇದೀಗ ಅಪ್ಪಂ ಮತ್ತು ಅರವಣ ಪ್ರಸಾದದ ಕಾರಣಕ್ಕೆ ಸುದ್ದಿಯಲ್ಲಿದೆ.
ಸನ್ನಿಧಾನದಲ್ಲಿ ಸ್ವಾಮಿಯ ಪ್ರಧಾನ ಪ್ರಸಾದಗಳಾದ ಅಪ್ಪಂ ಮತ್ತು ಅರವಣಕ್ಕೆ ನಿರ್ಬಂಧ ಹೇರಲಾಗಿದೆ. ಈ ಎರಡೂ ಪ್ರಸಾದದ ಉತ್ಪಾದನೆ ಸ್ಥಗಿತಗೊಂಡಿದ್ದು, ಶನಿವಾರ ಬೆಳಗ್ಗಿನಿಂದ ಪ್ರಸಾದ ವಿತರಣೆಗೆ ನಿರ್ಬಂಧ ಹೇರಲಾಗಿದೆ. ಬೆಲ್ಲದ ಕೊರತೆಯಿಂದ ಪ್ರಸಾದ ವಿತರಣೆ ಸ್ಥಗಿತಗೊಂಡಿದ್ದು, ಒಬ್ಬ ಯಾತ್ರಿಕನಿಗೆ ಕೇವಲ 5 ಪ್ಯಾಕೆಟ್ ಅಪ್ಪಂ ಮತ್ತು ಐದು ಬಾಟಲಿ ಅರವಣ ಪ್ರಸಾದ ಅನ್ನುವ ನಿಯಮ ಜಾರಿಗೊಳಿಸಲಾಗಿದೆ.
ಕಳೆದ ಒಂದು ವಾರದಿಂದ 1 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಸನ್ನಿಧಾನಕ್ಕೆ ಭೇಟಿ ನೀಡಿದ್ದು, ಇದು ದೇವಸ್ಥಾನ ಮಂಡಳಿಯ ಲೆಕ್ಕಾಚಾರವನನ್ನೇ ಉಲ್ಟಾಪಲ್ಟಾ ಮಾಡಿದೆ. ದೇವಸ್ವಂ ಆಡಳಿತ ಮಂಡಳಿ ಈ ಪ್ರಮಾಣದಲ್ಲಿ ಮಾಲಾಧಾರಿಗಳು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಎಂದು ಊಹಿಸಿರಲಿಲ್ಲ.
ಇದನ್ನೂ ಓದಿ : ಸ್ಪೀಡ್ ತೋರಿಸಲು ಬಂದವನು ಸೇರಿದ್ದು ಯಮಪುರಿ : 24 ಲಕ್ಷ ರೂ ಮೊತ್ತದ ಬೈಕ್ ಪುಡಿ ಪುಡಿ
ಈ ಹಿಂದೆ ಮಂಡಲ ಪೂಜೆಯ ತನ ಪ್ರಸಾದ ತಯಾರಿಕೆಗೆ ಯಾವುದೇ ಸಮಸ್ಯೆ ಇಲ್ಲ. ಬೆಲ್ಲ ಸೇರಿದಂತೆ ಎಲ್ಲಾ ವಸ್ತುಗಳ ದಾಸ್ತಾನು ಮಾಡಲಾಗಿದೆ ಎಂದು ದೇವಸ್ವಂ ಬೋರ್ಡ್ ಹೇಳಿತ್ತು. ಆದರೆ ಇದೀಗ ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಹರಿದು ಬಂದಿದೆ.
ಸ್ವಾಮಿಯ ಪ್ರಧಾನ ಪ್ರಸಾದಗಳಾದ ಅಪ್ಪಂ ಮತ್ತು ಅರವಣಕ್ಕೆ ನಿರ್ಬಂಧ ಹೇರಿರುವುದು ಹೆಚ್ಚಿನ ಪ್ರಮಾಣದಲ್ಲಿ ಪ್ರಸಾದ ಖರೀದಿಸುವ ಹೊರ ರಾಜ್ಯಗಳ ಭಕ್ತರ ಮೇಲೆ ಪರಿಣಾಮ ಬೀರಿದೆ. ಇದು ಯಾತ್ರಾರ್ಥಿಗಳ ಪ್ರತಿಭಟನೆಗೂ ಕಾರಣವಾಗಿದೆ. ಅಲ್ಲದೆ ಅದೆಲ್ಲಿ ಪ್ರಸಾದ ಸಿಗೋದಿಲ್ಲವೋ ಅನ್ನುವ ಆತಂಕದಿಂದ ಪ್ರಸಾದ ಕೌಂಟರ್ ಗಳ ಮುಂದೆ ಭಕ್ತರ ದಟ್ಟಣೆಯೂ ಹೆಚ್ಚಾಗುವಂತೆ ಮಾಡಿದೆ.
ಪ್ರಸಾದ ತಯಾರಿಸುವ ನಿಟ್ಟಿನಲ್ಲಿ ಅಗತ್ಯವಾಗಿರುವ ಬೆಲ್ಲ ಪೂರೈಸುವ ಗುತ್ತಿಗೆ ಪಡೆದಿರುವ ಸಂಸ್ಥೆ ಮಹಾರಾಷ್ಟ್ರದಿಂದ ಬೆಲ್ಲವನ್ನು ತರಿಸಿಕೊಳ್ಳುತ್ತದೆ. ಆದರೆ ಅಲ್ಲಿ ಕಬ್ಬಿನ ಬೆಳೆ ಕೈ ಕೊಟ್ಟಿದ್ದು, ಎರಡು ವಾರಗಳಿಂದ ಬೆಲ್ಲ ಬರೋದು ಸ್ಥಗಿತಗೊಂಡಿದೆ.
ಬೆಲ್ಲದ ಸಮಸ್ಯೆ ಪರಿಹರಿಸಲು ಮುಕ್ತ ಮಾರುಕಟ್ಟೆಯಿಂದ ಬೆಲ್ಲ ತರೋ ಪ್ರಯತ್ನಗಳು ನಡೆಯಿತು. ಆದರೆ ಅದು ಫಲ ನೀಡಿಲ್ಲ. ಹೀಗಾಗಿಯೇ ಸ್ವಾಮಿಯ ಪ್ರಧಾನ ಪ್ರಸಾದಗಳಾದ ಅಪ್ಪಂ ಮತ್ತು ಅರವಣಕ್ಕೆ ನಿರ್ಬಂಧ ಹೇರುವ ಪರಿಸ್ಥಿತಿ ಬಂದಿದೆ. ಎರಡು ದಿನಗಳಲ್ಲಿ ಸಮಸ್ಯೆ ಬಗೆ ಹರಿಯುವ ನಿರೀಕ್ಷೆ ಇದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಅಪ್ಪಂ ಮತ್ತು ಅರವಣ ಪ್ರಸಾದ ಮಾರಾಟದ ಮೇಲಿನ ನಿರ್ಬಂಧ ಮುಂದುವರಿಸುವ ಸಾಧ್ಯತೆಗಳಿದೆ.
Discussion about this post