ಬೆಂಗಳೂರು : ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ, ಪೊಲೀಸ್ ಸೇರಿದಂತೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ಸರ್ಕಾರಿ ನೌಕರರ ಬಗ್ಗೆಯೂ ನಿರ್ಲಕ್ಷ್ಯ ವಹಿಸಿದೆ. 108 ಚಾಲಕರಿಗೆ ಇನ್ನೂ ಸಂಬಳ ಆಗಿಲ್ಲ, ಆಶಾ ಕಾರ್ಯಕರ್ತೆಯರು ಇಂದಲ್ಲ ನಾಳೆ ಸಂಬಳ ಸಿಗಬಹುದು ಎಂದು ಕಾಯುತ್ತಿದ್ದಾರೆ.
ಈ ನಡುವೆ ಮಳೆ ಗಾಳಿ ಚಳಿ ಅನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರೀತಿ ಉಕ್ಕಿ ಬಂದಿದೆ. ಪೊಲೀಸರ ಕಷ್ಟವೇನು ಅನ್ನುವುದು ಅರ್ಥವಾದ ಬೆನ್ನಲ್ಲೇ ಬೀದಿಯಲ್ಲಿ ನಿಂತು ಸಂಚಾರ ನಿರ್ವಹಣೆ ಮಾಡುವ ಪೊಲೀಸರಿಗೆ ರೈನ್ ಕೋಟ್ ಗಳನ್ನು ವಿತರಿಸಲು ಆದೇಶಿಸಿದ್ದಾರೆ. ಸಿಎಂ ಆದೇಶ ಹೊರ ಬಿದ್ದ ಕೆಲವೇ ಗಂಟೆಗಳಲ್ಲಿ ಸಾಂಕೇತಿಕ ಉದ್ಘಾಟನೆಯೂ ನಡೆದಿದೆ.
ನಗರದಲ್ಲಿ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳು ಕಾರಿನಲ್ಲಿ ಕಚೇರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಸಿಕ್ಕಾಪಟ್ಟೆ ಮಳೆ ಸುರಿಯುತ್ತಿತ್ತು. ಆಗ ಮಳೆಯಲ್ಲಿ ನೆನೆಯುತ್ತಾ ಟ್ರಾಫಿಕ್ ನಿರ್ವಹಣೆ ಮಾಡುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಸ್ಥಿತಿಯನ್ನು ಯಡಿಯೂರಪ್ಪ ಮನಸ್ಸು ಕರಗಿದೆ. ಅವರ ಸಂಕಷ್ಟಕ್ಕೆ ಮರುಗಿದ ಸಿಎಂ ಯಡಿಯೂರಪ್ಪ ಅದೇ ಕಾರಿನಲ್ಲಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಸರ್ಕಾರದ ವತಿಯಿಂದಲೇ ತಕ್ಷಣ ರೈನ್ ಕೋಟ್ ಗಳನ್ನು ವಿತರಿಸುವಂತೆ ಸೂಚಿಸಿದ್ದಾರೆ.
ಸಿಎಂ ಹೇಳಿದ್ದಾರೆ ಅಂದ ಮೇಲೆ ಮುಗಿಯಿತು, ಎಸ್.ಡಿ.ಆರ್.ಎಫ್ ನಿಧಿಯಿಂದ ರಾಜ್ಯದ ಎಲ್ಲಾ ಟ್ರಾಫಿಕ್ ಪೊಲೀಸರಿಗೆ ರೈನ್ ಕೋಟ್ ಖರೀದಿಸಲು ಬೊಮ್ಮಾಯಿ ನಿರ್ಧರಿಸಿ, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಬುಧವಾರ ಸಂಚಾರ ವಿಭಾಗದ ಪೊಲೀಸರಿಗೆ ಸರ್ಕಾರ ವತಿಯಿಂದಲೇ ರೈನ್ ಕೋಟ್ ವಿತರಿಸುವ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಲಾಗಿದೆ.
ಮುಖ್ಯಮಂತ್ರಿಗಳ ನಿರ್ಧಾರ ಚೆನ್ನಾಗಿದೆ. ಹೀಗೆ ಪದೇ ಪದೇ ರಾಜ್ಯದ ಎಲ್ಲಾ ಕಡೆ ಅಪರೂಪಕ್ಕಾದ್ರೂ ರಾಜ್ಯದ ದೊರೆ ಬೀದಿ ಸಂಚಾರ ಕೈಗೊಂಡ್ರೆ ಜನರ ಸಂಕಷ್ಟ ಅರಿವಾಗುತ್ತದೆ. ಈ ವರ್ಷ ಯಡಿಯೂರಪ್ಪ ಅವರ ಮನಸ್ಸು ಕರಗಿ ರೈನ್ ಕೋಟ್ ಗಳು ಪೊಲೀಸರಿಗೆ ತಲುಪಲಿದೆ. ಮುಂದಿನ ವರ್ಷದ ಕಥೆಯೇನು.
ಹೀಗಾಗಿ ಇದಕ್ಕೊಂದು ನೀತಿ ರೂಪಿಸಿ, ರೈನ್ ಕೋಟ್ ನಲ್ಲೂ ಹಣ ಹೊಡೆಯಲು ಅವಕಾಶ ಕೊಡದೆ ಪ್ರತೀ ವರ್ಷ ಪೊಲೀಸರಿಗೆ ರೈನ್ ಕೋಟ್ ಕೊಡುವಂತಾದ್ರೆ ಚೆಂದ.
Discussion about this post