ಬೆಂಗಳೂರು : ಕೊರೋನಾ ಸೋಂಕಿನ ಎರಡನೇ ಅಲೆ ಅಂತ್ಯವಾಗುತ್ತಿದ್ದಂತೆ ಮೂರನೇ ಅಲೆಯ ಭೀತಿ ದೂರವಾಗಿತ್ತು. ತಜ್ಞರ ಅಭಿಪ್ರಾಯದ ಪ್ರಕಾರ ಇಷ್ಟು ಹೊತ್ತಿಗೆ ಮೂರನೆ ಅಲೆ ಬರಬೇಕಾಗಿತ್ತು. ಆದರೆ ಎರಡನೇ ಅಲೆಯಲ್ಲಿ ಅತೀ ಹೆಚ್ಚು ಮಂದಿ ಸೋಂಕಿಗೆ ತುತ್ತಾದ ಕಾರಣ ಸಹಜವಾಗಿಯೇ ರೋಗನಿರೋಧಕ ಶಕ್ತಿ ಹೆಚ್ಚಾಗಿತ್ತು. ಮಾತ್ರವಲ್ಲದೆ ಲಸಿಕಾ ಕಾರ್ಯಕ್ರಮಕ್ಕೆ ವೇಗ ನೀಡಿದ ಕಾರಣ ಮೂರನೇ ಅಲೆಗೆ ಅಬ್ಬರಿಸಲು ಸಾಧ್ಯವಾಗಲಿಲ್ಲ.
ಈ ನಡುವೆ ದಸರಾ, ದೀಪಾವಳಿ ಹಬ್ಬದ ಕಾರಣಕ್ಕೆ ಜನ ಕೊರೋನಾ ಭಯ ಮರೆತು ಬೀದಿಗಿಳಿದಿದ್ದಾರೆ.ಮಾತ್ರವಲ್ಲದೆ ಸಿಂದಗಿ, ಹಾನಗಲ್ ಉಪಚುನಾವಣೆಯಲ್ಲಿ ರಾಜಕಾರಣಿಗಳೇ ಮಾಸ್ಕ್, ಸಾಮಾಜಿಕ ಅಂತರಕ್ಕೆ ಗೋಲಿ ಹೊಡೆದಿದ್ದಾರೆ. ಹೀಗಾಗಿ ಕೊರೋನಾ ಮೂರನೆ ಅಲೆಯ ಭೀತಿ ಹೆಚ್ಚಾಗಿದೆ.
ಅಷ್ಟೇ ಅಲ್ಲದೆ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನಕ್ಕೆ 20 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದಾರೆ. ಈ ವೇಳೆ ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಲಾಗಿಲ್ಲ. ಹೀಗಾಗಿ ಇನ್ನು ಮುಂದಿನ 15 ದಿನಗಳಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಏರಬಹುದು ಅನ್ನುವುದು ತಜ್ಞರ ಊಹೆ. ಹೀಗಾಗಿ ಇನ್ನು 15 ದಿನ ಕೊರೋನಾ ಪರೀಕ್ಷೆಯನ್ನು ಹೆಚ್ಚಿಸುವಂತೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.
ಇದರೊಂದಿಗೆ ಮೆಡಿಕಲ್ ಸ್ಟೋರ್ ಗಳಲ್ಲಿ ನೆಗಡಿ, ಜ್ವರ, ಉಸಿರಾಟ ತೊಂದರೆಗೆ ಮದ್ದು ಪಡೆಯುವವರ ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ಪಡೆಯುವಂತೆ ಸೂಚನೆ ನೀಡಲಾಗಿದೆ.
Discussion about this post