ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಿದ್ದರಾಮಯ್ಯ
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯಿಂದ ವಿಶ್ವ ಆನೆ ದಿನವಾದ ಇಂದು ಆಯೋಜಿಸಿದ್ದ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ, ಮಾನವ-ಆನೆ ಸಂಘರ್ಷ ತಪ್ಪಿಸಲು ಸರ್ಕಾರ ಬದ್ಧವಾಗಿದೆ. ಸೌರ ವಿದ್ಯುತ್ ಬೇಲಿ ಅಳವಡಿಸುವ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಈವರೆಗೆ ೫೦ ಸಾವಿರ ಎಕರೆ ಕೃಷಿ ಭೂಮಿಯನ್ನು ಸೌರವಿದ್ಯುತ್ ಬೆಲಿಯ ಮೂಲಕ ಸಂರಕ್ಷಿಸಲಾಗಿದೆ.
ಇದರಿಂದ ರೈತರ ಜೀವನೋಪಾಯ ರಕ್ಷಣೆ ಜೊತೆಗೆ ಮಾನವ ಮತ್ತು ವನ್ಯಜೀವಿ ಸಂಘರ್ಷ ತಪ್ಪಿಸಿದಂತಾಗಿದೆ ಎಂದರು. ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ, ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿದ್ದು, ಅರಣ್ಯ ಇಲಾಖೆ ಎಲ್ಲ ರೀತಿಯಲ್ಲೂ ಸರ್ವಸನ್ನದ್ಧವಾಗಿದೆ. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ವ್ಯಾಪಕ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ.
ಪ್ರತಿಯೊಂದು ಜಿಲ್ಲೆಯಲ್ಲೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಆನೆ ರಕ್ಷಣಾ ಕಾರ್ಯಪಡೆ ರಚಿಸಲಾಗಿದ್ದು, ಈ ಮೂಲಕ ಪ್ರತಿವರ್ಷ ೧ ಸಾವಿರದ ೨೦೦ ಸಂಘರ್ಷಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ ಎಂದು ಹೇಳಿದರು.
ಮಾನವ ಮತ್ತು ಆನೆ ಸಂಘರ್ಷ ತಡೆಯಲು ವೈಜ್ಞಾನಿಕ ತಿಳುವಳಿಕೆ, ಸ್ಥಳ ಸಂಶೋಧನೆಗಳು, ನೈಜ ಅನುಭವಗಳು ಅಗತ್ಯವಾಗಿದೆ. ಕಾರ್ಯಕ್ರಮದ ಮೂಲಕ ಪರಸ್ಪರ ಯೋಜನೆಗಳ ವಿನಿಮಯದಿಂದ ಉತ್ತಮ ಉಪಾಯಗಳನ್ನು ಕಂಡು ಕೊಳ್ಳಬಹುದು ಎಂದರು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಜಾರ್ಖಂಡ್ ಅರಣ್ಯ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾನವ-ಆನೆ ಸಂಘರ್ಷದ ಪುಸ್ತಕ, ಸಂಶೋಧನಾ ಪ್ರತಿ ಬಿಡುಗಡೆ, ಫೋಟೋ ಗ್ಯಾಲರಿ ಮತ್ತು ವಸ್ತು ಪ್ರರ್ಶನಕ್ಕೆ ಚಾಲನೆ ಹಾಗೂ ವಿಶೇಷ ಸಾಧನೆಗೈದ ಅರಣ್ಯ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.