ಹಾಸನ : ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪಕ್ಷದ ಹಿರಿಯರನ್ನಾಗಲಿ, ಸಂಘದ ಹಿರಿಯರನ್ನಾಗಲಿ ಭೇಟಿ ಮಾಡದ ಬಸವರಾಜ್ ಬೊಮ್ಮಾಯಿ ಮೊಟ್ಟ ಮೊದಲು ದೇವೇಗೌಡರನ್ನು ಭೇಟಿಯಾಗಿರುವುದು ಮೂಲ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಸನ, ಮೈಸೂರು ಭಾಗದಲ್ಲಿ ನಿತ್ಯ ಜೆಡಿಎಸ್ ಕಾರ್ಯಕರ್ತರೊಂದಿಗೆ ರಾಜಕೀಯವಾಗಿ ಹೋರಾಡಿ ಪಕ್ಷವನ್ನು ಕಟ್ಟಿ ಬೆಳೆಸುತ್ತೇವೆ. ಈ ವೇಳೆ ಮುಖ್ಯಮಂತ್ರಿಗಳು ಜೆಡಿಎಸ್ ನಾಯಕರೊಂದಿಗೆ ರಾಜಕೀಯ ಗೆಳೆತನಕ್ಕೆ ಮುಂದಾದ್ರೆ ನಮ್ಮ ಕಥೆ ಏನು ಅನ್ನುವುದು ಅವರ ಪ್ರಶ್ನೆಯಾಗಿತ್ತು. ಜೊತೆಗೆ ದಳಪತಿಗಳು ಬೊಮ್ಮಾಯಿ ನಮ್ಮದೇ ಪಕ್ಷದ ಸಿಎಂ ಅನ್ನುವ ರೀತಿಯನ್ನು ಹೇಳಿಕೆ ಕೊಡುತ್ತಿದ್ರೆ ನಾನು ಬಿಜೆಪಿಯಿಂದ ಸಿಎಂ ಆಗಿದ್ದೇನೆ ಅನ್ನುವ ಸ್ಪಷ್ಟನೆಯನ್ನೂ ಬೊಮ್ಮಾಯಿಯವರು ಕೊಡಲಿಲ್ಲ ಕಟ್ಟಾ ಬಿಜೆಪಿ ಬೆಂಬಲಿಗರ ಆಕ್ರೋಶ.
ಈ ಬಗ್ಗೆ ಹಾಸನ ಶಾಸಕ ಪ್ರೀತಂಗೌಡ ನೇರವಾಗಿ ಅಸಮಾಧಾನ ಹೊರ ಹಾಕಿದ್ದು, ಮುಖ್ಯಮಂತ್ರಿಯಾದವರು ಮೊದಲು ದೇವಸ್ಥಾನಕ್ಕೋ, ಮಠಕ್ಕೋ ಭೇಟಿ ನೀಡುತ್ತಾರೆ. ಆದರೆ ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯಲ್ಲಿ ದೇವೇಗೌಡರ ಮನೆಗೆ ಬೊಮ್ಮಾಯಿ ಹೋಗಿದ್ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದರಿಂದ ನಮ್ಮ ಕಾರ್ಯಕರ್ತರಿಗೆ ನೋವಾಗಿದೆ. ತಮ್ಮ ತಂದೆಯ ಸರ್ಕಾರ ಕೆಡವಿದವರ ಮನೆಗೆ ಹೋಗುವ ಅಗತ್ಯವಾದರೂ ಏನಿತ್ತು. ಈ ಭೇಟಿ ಜಿಪಂ ಹಾಗೂ ತಾಪಂ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಅಂದಿದ್ದಾರೆ.
ಇನ್ನು ಪ್ರೀತಂಗೌಡ ಆಕ್ರೋಶದಿಂದ ವಿಚಲಿತರಾದ ಮುಖ್ಯಮಂತ್ರಿಗಳು, ದೇವೇಗೌಡರ ಭೇಟಿ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ.ಹಾಸನ ಜಿಲ್ಲೆಯ ಮುಖಂಡರು ಕಾರ್ಯಕರ್ತರು ಈ ಸಂಬಂಧ ಈಗಾಗಲೇ ನನ್ನ ಭೇಟಿ ಮಾಡಿದ್ದಾರೆ. ಅವರಿಗೆ ನಾನು ವಿಶ್ವಾಸ ತುಂಬಿದ್ದೇನೆ. ಪಕ್ಷದ ಶಾಸಕರು, ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಹಾಗೂ ಅವರ ಹಿತ ಕಾಯಲು ನಾನು ಬದ್ಧನಾಗಿದ್ದೇನೆ ಅಂದಿದ್ದಾರೆ.
ಇನ್ನೂ ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುವುದಾದರೆ ಬಿಜೆಪಿ ಕಚೇರಿಯಲ್ಲಿ ಕಸ ಹೊಡೆದುಕೊಂಡಿರುತ್ತೇನೆ ಅಂದಿದ್ದಾರೆ.
Discussion about this post