ಉಡುಪಿಯ ಅಷ್ಟಮಠಗಳೊಂದಾದ ಶ್ರೀಪುತ್ತಿಗೆ ಮಠದಲ್ಲಿ ಇಂದು ಶಿಷ್ಯ ಸ್ವೀಕಾರ ಸಮಾರಂಭ ಸಂಪ್ರದಾಯ ಪ್ರಕಾರವಾಗಿ ನಡೆಯಿತು.
ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉಡುಪಿಯ ಕುಂಜಿಬೆಟ್ಟು ನಿವಾಸಿಗಳಾದ ಗುರುರಾಜ ಆಚಾರ್ಯ ಮತ್ತು ವಿನುತಾ ಆಚಾರ್ಯ ಅವರ ಪುತ್ರನಾದ ಪ್ರಶಾಂತ ಆಚಾರ್ಯರನ್ನು ಉತ್ತರಾಧಿಕಾರಿಗಳನ್ನಾಗಿ ಸ್ವೀಕರಿಸಿದರು.
ಪುತ್ತಿಗೆ ಮಠಕ್ಕೆ ಕಿರಿಯ ಶ್ರೀಗಳಾಗಿ ನೇಮಕಗೊಂಡಿರುವ ಪ್ರಶಾಂತ ಆಚಾರ್ಯ ಅವರಿಗೆ ಶ್ರೀಸುಶ್ರೀಂದ್ರತೀರ್ಥಶ್ರೀಪಾದರು ಎಂದು ನಾಮಕರಣವನ್ನು ಮಾಡಲಾಗಿದೆ.
ಈ ಮೂಲಕ ಶ್ರೀಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀಉಪೇಂದ್ರತೀರ್ಥರ ಭವ್ಯಪರಂಪರೆಯ 31ನೆಯ ಪೀಠಾಧಿಪತಿಗಳಾಗಿ ಶ್ರೀಸುಶ್ರೀಂದ್ರತೀರ್ಥಶ್ರೀಪಾದರು ನೇಮಕಗೊಂಡಿದ್ದಾರೆ.
ಶಿಷ್ಯ ಸ್ವೀಕಾರ ಕಾರ್ಯಕ್ರಮದಲ್ಲಿ ಚಿತ್ರಾಪುರ ಸಂಸ್ಥಾನದ ವಿದ್ಯೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಅಷ್ಟಮಠದ ಪುರೋಹಿತರಾದ ವೇ.ಮೂ.ಹೆರ್ಗ ವೇದವ್ಯಾಸ ಭಟ್ ವೈದಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು, ವಿದ್ವಾಂಸರಾದ ಪಂಜ ಭಾಸ್ಕರ ಭಟ್. ಚಿಪ್ಪಗಿರಿ ನಾಗೇಂದ್ರ ಆಚಾರ್ಯ. ಡಾ.ಎನ್.ವೆಂಕಟೇಶಾಚಾರ್ಯ ಬೆಂಗಳೂರು. ಡಾ.ರಾಮನಾಥ ಆಚಾರ್ಯ ಉಡುಪಿ , ಶಾಸಕರಾದ ಶ್ರೀ ರಘುಪತಿ ಭಟ್. ಲಾಲಾಜಿ ಮೆಂಡನ್ ಈ ವೇಳೆ ಉಪಸ್ಥಿತರಿದ್ದರು.
ಇನ್ನು ಉತ್ತರಾಧಿಕಾರಿಯನ್ನು ನೇಮಕ ಪ್ರಕ್ರಿಯೆ ಸಾಕಷ್ಟು ದಿನಗಳ ಹಿಂದೆ ಪ್ರಾರಂಭಗೊಂಡಿದ್ದರೂ ,ಆಶ್ರಮ ಸ್ವೀಕಾರ ಪ್ರಕ್ರಿಯೆ ಇದೇ ತಿಂಗಳ 20 ರಂದು ಪ್ರಾರಂಭಗೊಂಡಿತ್ತು.
ಪ್ರಾಯಶ್ಚಿತ್ತಗಳು, ವಿರಜಾ ಹೋಮ ಮತ್ತು ಆತ್ಮಶ್ರಾದ್ಧಗಳ ಬಳಿಕ ಹಲವು ಧಾರ್ಮಿಕ ವಿಧಿ ವಿಧಾನಗಳು ಕೂಡಾ ನಡೆಯಿತು.
ಬೆಳಿಗ್ಗೆ 11.45ರ ಶುಭ ಮುಹೂರ್ತದಲ್ಲಿ ವೇದ–ಮಂತ್ರ ಘೋಷಗಳ ನಡುವೆ ಪ್ರಶಾಂತ ಆಚಾರ್ಯ ಅವರಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಎಂದು ಮರುನಾಮಕರಣ ಮಾಡುವ ಮೂಲಕ ಪಟ್ಟಾಭಿಷೇಕ ನೆರವೇರಿಸಲಾಯಿತು.
ಇದಕ್ಕೂ ಮುನ್ನ ಧಾರ್ಮಿಕ ವಿಧಿವಿಧಾನಗಳು ನಡೆದವು. ಸೋಮವಾರ ಸ್ವರ್ಣಾ ನದಿಯ ತಟದಲ್ಲಿ ವಿರಾಜ ಹೋಮ, ಪ್ರಾಯಃಶ್ಚಿತ ಹೋಮಗಳನ್ನು ನಡೆಸಲಾಯಿತು. ಭಾನುವಾರ ಆತ್ಮಶ್ರಾದ್ಧ ಹಾಗೂ ಪೂರ್ವಾಶ್ರಮದವರಿಗೆ ಶ್ರಾದ್ಧ ಕ್ರಿಯೆಗಳು ನಡೆದವು.
ಸೋಮವಾರ ಬೆಳಿಗ್ಗೆ ನೂತನ ಶ್ರೀಗಳು ಸ್ವರ್ಣ ನದಿಯಲ್ಲಿ ಅವಘಾಹನ ಸ್ನಾನ ಮಾಡಿ ಹಳೆಯ ವಸ್ತ್ರಗಳನ್ನು ನದಿಯಲ್ಲಿ ಬಿಟ್ಟು ಹೊಸ ವಸ್ತ್ರಗಳನ್ನು ಧರಿಸಿದರು. ಬಳಿಕ ಹಿರಿಯ ಶ್ರೀಗಳಿಂದ ದಂಡ ಸ್ವೀಕರಿಸಿ, ಪಟ್ಟದ ದೇವರಾದ ವೀರವಿಠಲನಿಗೆ ಹಾಗೂ ಸ್ಥಂಭ ನರಸಿಂಹ ಸ್ವಾಮಿಗೆ ಪ್ರಾರ್ಥಿಸಿ, ಸನ್ಯಾಸ ದೀಕ್ಷೆ ಪಡೆದುಕೊಂಡರು.
ನಂತರ, ಮಾತನಾಡಿದ ಸುಗುಣೇಂದ್ರ ಸ್ವಾಮೀಜಿ ‘ಭಗವಂತನ ಸಂಕಲ್ಪದಂತೆ ಉತ್ತರಾಧಿಕಾರಿ ನೇಮಕ ನಡೆದಿದೆ. ವಟುವಿನ ಬಗ್ಗೆ 8 ತಿಂಗಳ ಸಂಶೋಧನೆ ಬಳಿಕ ಶಿಷ್ಯ ಸ್ವೀಕಾರ ಮಾಡಿಕೊಳ್ಳಲಾಗಿದೆ. ಮೊದಲ ಬಾರಿಗೆ 29 ವರ್ಷದ ವಟುವಿಗೆ ಸನ್ಯಾಸ ದೀಕ್ಷೆ ನೀಡುವ ಸಾಹಸ ಮಾಡಿದ್ದೇನೆ. ಪುತ್ತಿಗೆ ಮಠ ಸಾಹಸಕ್ಕೆ ಹೆಸರಾದ ಮಠ’ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡರು
ವಿಶೇಷ ಅಂದ್ರೆ ಅಷ್ಟ ಮಠದ ಬೇರೆ ಯಾವ ಯತಿಗಳಿಗೂ ಈ ಶಿಷ್ಯ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ. ಹೀಗಾಗಿ ಅಷ್ಟ ಮಠದ ಯಾವ ಯತಿವರೆಣ್ಯರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ.
Discussion about this post