ನಿನ್ನೆ ನಡೆದ ವಿಶ್ವವಿಖ್ಯಾತ ಜಂಭೂ ಸವಾರಿ ಸಂದರ್ಭದಲ್ಲಿ ದಸರಾ ಆನೆ ಅರ್ಜುನನ ಮೇಲಿದ್ದ ಅಂಬಾರಿ ಬಲಭಾಗಕ್ಕೆ ವಾಲಿತ್ತು.
ಅರಮನೆ ಆವರಣದಲ್ಲಿ ಅಂಬಾರಿ ಕಟ್ಟಿದ ನಂತರ ರಾಜ ಮನೆತನದ ನಿವಾಸಕ್ಕೆ ತೆರಳಿ ಗೌರವ ಸಲ್ಲಿಸುವುದು ವಾಡಿಕೆ. ಹಾಗೇ ಬುಧವಾರ ಸಂಜೆ ಅರ್ಜುನ ಅಂಬಾರಿ ಸಮೇತ ಅರಮನೆ ಆವರಣಕ್ಕೆ ತೆರಳಿದ್ದ ವೇಳೆ ರಾಜಮಾತೆ ಪ್ರಮೋದಾದೇವಿ ಅಂಬಾರಿ ವಾಲಿರುವ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿದ್ದರು.
ಏನಾದರೂ ಹೆಚ್ಚು ಕಡಿಮೆಯಾದರೆ ನಾಡಿಗೆ ಆಪತ್ತು ಅನ್ನುವ ನಂಬಿಕೆ ಇರುವ ಕಾರಣದಿಂದ ಸರಿಪಡಿಸುವಂತೆ ಸೂಚಿಸಿದ್ದರು.
ಆದರೆ ಅರಣ್ಯಾಧಿಕಾರಿಗಳು ಮತ್ತು ಜಂಭೂ ಸವಾರಿಯ ಉಸ್ತುವಾರಿ ಹೊತ್ತವರು ವಾಲಿದ ಅಂಬಾರಿಯನ್ನ ಹೊತ್ತ ಅರ್ಜುನನನ್ನು ಮುನ್ನಡೆಸಿ ದಸರಾ ಜಂಭೂ ಸವಾರಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಕುಮ್ಮಿ ಆನೆಗಳ ಮೇಲೆ ಕೂತ ಮಾವುತರ ಕೈಗೆ ಹಗ್ಗ ಕೊಟ್ಟು ವಾಲಿದ ಅಂಬಾರಿಯನ್ನು ಮತ್ತಷ್ಟು ವಾಲದಂತೆ ತಡೆಯಲಾಗಿತ್ತು. ತಾಯಿ ಚಾಮುಂಡೇಶ್ವರಿ ದಯೆಯಿಂದ ಎಲ್ಲವೂ ಸುಸೂತ್ರವಾಗಿ ಮುಕ್ತಾಯಗೊಂಡಿದೆ.
ಇನ್ನು ಅಂಬಾರಿ ವಾಲುವುದಕ್ಕೆ ವ್ಯವಸ್ಥೆ ಲೋಪವೇ ಕಾರಣ ಅನ್ನುವುದು ಗೊತ್ತಾಗಿದೆ. ಅಂಬಾರಿ ಕಟ್ಟುವ ಸಂದರ್ಭದಲ್ಲಿ ಆ ಜಾಗಕ್ಕೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು, ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ಅರಮನೆ ಸಿಬ್ಬಂದಿ ಮತ್ತು ಅಂಬಾರಿ ಕಟ್ಟುವ ಜವಬ್ದಾರಿ ಹೊತ್ತವರು ಮಾತ್ರ ಅಲ್ಲಿಗೆ ತೆರಳುತ್ತಾರೆ. ಮಾಧ್ಯಮದ ಮಂದಿಗೂ ಅಲ್ಲಿಗೆ ಪ್ರವೇಶವಿಲ್ಲ.
ಆದರೆ ಈ ಬಾರಿ ಫೋಟೋಗ್ರಾಫರ್ ಒಬ್ಬರು ಅಂಬಾರಿ ಕಟ್ಟುವ ಜಾಗಕ್ಕೆ ತೆರಳಿದ್ದರು. ಅಂಬಾರಿ ಕಟ್ಟುವ ಸಂದರ್ಭದಲ್ಲಿ ಪೋಟೋ ತೆಗೆಯುವಾಗ ಫ್ಲ್ಯಾಶ್ ಕಂಡ ಅರ್ಜುನ ಬೆದರಿ ಮೈ ಕೊಡವಿತ್ತು. ಹೀಗಾಗಿ ಅಂಬಾರಿ ಜಾರಿತ್ತು. ಮತ್ತೆ ಸರಿ ಪಡಿಸಲು ಹೋದರೆ ಹಲವಾರು ಗಂಟೆಗಳು ಬೇಕಾಗುತ್ತದೆ. ಸಮಯದ ಕೊರತೆಯ ಕಾರಣದಿಂದ ಹಗ್ಗ ಕಟ್ಟಿ ಜಂಭೂ ಸವಾರಿ ಮುನ್ನಡೆಸುವ ನಿರ್ಧಾರ ಕೈಗೊಳ್ಳಲಾಗಿತ್ತು.
ಅಂಬಾರಿ ಕಟ್ಟುವ ಜಾಗದಲ್ಲಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಭದ್ರತೆ ಕೈಗೊಳ್ಳದ ಕಾರಣದಿಂದ ಅಲ್ಲಿ ಅಷ್ಟೊಂದು ಜನ ಜಂಗುಳಿ ಸೇರಿತ್ತು. ಸೀಮಿತ ಮತ್ತು ಅಗತ್ಯ ಜನಗಳಿಗೆ ಮಾತ್ರ ಆ ಜಾಗಕ್ಕೆ ಪ್ರವೇಶ ಕೊಟ್ಟಿರುತ್ತಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಅನ್ನುವ ಮಾತುಗಳು ಕೇಳಿ ಬರುತ್ತಿದೆ.
ಹಾಗಂತ ಇದನ್ನು ಪೊಲೀಸ್ ವೈಫಲ್ಯ ಅನ್ನುವ ಹಾಗಿಲ್ಲ. ಆ ಫೋಟೋಗ್ರಾಫರ್ ಹೇಗೆ ಅಲ್ಲಿಗೆ ಬಂದ ಆತ ಯಾರು ಅನ್ನುವುದನ್ನು ತಿಳಿಯಬೇಕಾದರೆ ತನಿಖೆಯೊಂದರ ಅಗತ್ಯವಿದೆ. ಪೊಲೀಸರೇ ಆ ಫೋಟೋಗ್ರಾಫರ್ ನನ್ನು ಒಳಗೆ ಬಿಟ್ಟರೆ, ಅಥವಾ ಬೇರೆ ಯಾರದ್ದೋ ಪ್ರಭಾವ ಬಳಸಿ ಆತ ಒಳಗೆ ಬಂದನೇ ಅನ್ನುವುದು ಗೊತ್ತಾಗಬೇಕಾಗಿದೆ.
ಹೀಗಾಗಿ ಈ ಬಾರಿ ಸೂಕ್ತ ತನಿಖೆಯೊಂದು ನಡೆದರೆ ಮುಂದಿನ ದಿನಗಳಲ್ಲಿ ಆಗಬಹುದಾದ ಎಡವಟ್ಟುಗಳಿಗೆ ಬ್ರೇಕ್ ಹಾಕಬಹುದಾಗಿದೆ.
Discussion about this post