ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕು ಬಿದ್ದು ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಡಿವೈಎಸ್ಪಿಯೊಬ್ಬರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ಪ್ರಧಾನ ಹಾಗೂ ವಿಶೇಷ ಸತ್ರ ನ್ಯಾಯಾಲಯ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಶಹಾಬಾದ್ ಠಾಣೆ ಇನ್ಸ್ಟೆಕ್ಟರ್ ಆಗಿದ್ದ ವಿಜಯಲಕ್ಷ್ಮೀ ಶಿಕ್ಷೆಗೆ ಗುರಿಯಾದವರು. ಸದ್ಯ ಅವರು ಕಲಬುರಗಿಯ ನಾಗರಿಕ ಹಕ್ಕು ಜಾರಿ ನೀರ್ದೇಶನಾಲಯ (ಸಿಆರ್ಇ ಸೆಲ್)ದಲ್ಲಿ ಡಿವೈಎಸ್ಪಿಯಾಗಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಜೆ.ಸತೀಶಸಿಂಗ್ ಅವರು ವಾದ, ಪ್ರತಿವಾದ ಆಲಿಸಿದ ಬಳಿಕ ಆರೋಪ ಸಾಬೀತಾಗಿದ್ದರಿಂದ ಡಿವೈಎಸ್ಪಿ ವಿಜಯಲಕ್ಷ್ಮೀ ಅವರಿಗೆ ಎರಡು ಸೆಕ್ಷನ್ ಗಳ ಅಡಿಯಲ್ಲಿ ಒಂದರಲ್ಲಿ ಮೂರು, ಮತ್ತೊಂದರಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು.
2015ರ ಡಿಸೆಂಬರ್ ನಲ್ಲಿ ದೇವನ ತೆಗನೂರಿನ ಪೆಟ್ರೋಲ್ ಬಂಕ್ ನಲ್ಲಿ ವಾಹನಕ್ಕೆ ಡೀಸೆಲ್ ಹಾಕಿಸಲು ತೆರಳಿದಾಗ ಸಿಬ್ಬಂದಿ ಜತೆ ಜಗಳವಾಡಿದ್ದರಿಂದ ರಾಜು ಎಂಬುವರ ವಿರುದ್ಧ ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜುನನ್ನು ಬಂಧಿಸಿ ಟಾಟಾ ಸುಮೋ ಜಪ್ತಿ ಮಾಡಿಕೊಳ್ಳಲಾಗಿತ್ತು.
ನ್ಯಾಯಾಲಯದಿಂದ ಜಾಮೀನು ತಂದ ಬಳಿಕ ವಾಹನ ಬಿಡಿಸಿಕೊಳ್ಳಲು ಶಹಾಬಾದ್ ಠಾಣೆಗೆ ರಾಜು ಬಂದಿದ್ದಾಗ ವಿಜಯಲಕ್ಷ್ಮೀ 25 ಸಾವಿರ ರೂ. ಬೇಡಿಕೆಯಿಟ್ಟಿದ್ದರು. ಬಳಿಕ ರಾಜು ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು. ಹೀಗಾಗಿ ಲಂಚ ನೀಡುವ ವೇಳೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಹಣದ ಸಮೇತ ಪೊಲೀಸ್ ಮೇಡಂನನ್ನು ಬಂಧಿಸಿದ್ದರು.
ಬಳಿಕ. ಕಲಬುರಗಿ ಲೋಕಾಯುಕ್ತ ಕಚೇರಿಯಲ್ಲಿ ಕೇಸ್ ದಾಖಲಾಗಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಲೋಕಾಯುಕ್ತರ ಪರ ಸರಕಾರಿ ಅಭಿಯೋಜಕ ಅಶೋಕ ಚಾಂದಕವಟೆ ವಾದ ಮಂಡಿಸಿದ್ದರು. ನ್ಯಾಯಾಧೀಶರು ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಡಿವೈಎಸ್ಪಿ ವಿಜಯಲಕ್ಷ್ಮೀ ಅವರನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಮೇಡಂ ಸಿಕ್ಕಿ ಹಾಕಿಕೊಂಡಿದ್ದು ಒಂದೇ ಪ್ರಕರಣದಲ್ಲಿ, ಅದೆಷ್ಟು ಗೊತ್ತಿಲ್ಲದೆ ತಿಂದು ತೇಗಿದ್ದಾರೋ ಗೊತ್ತಿಲ್ಲ. ಅಷ್ಟೇ ಅಲ್ಲದೆ ಲೋಕಾಯುಕ್ತ ವಿಚಾರಣೆ ಸಂದರ್ಭದಲ್ಲೇ ಮೇಡಂ ಪ್ರಮೋಷನ್ ಬೇರೆ ಪಡೆದಿದ್ದಾರೆ ಅಂದ್ರೆ ಪವರ್ ಫುಲ್ ಮೇಡಂ ಅನ್ನೋದರಲ್ಲಿ ಅನುಮಾನವಿಲ್ಲ.
Discussion about this post