ಆಂಟಿಮ್ ಪಂಘಲ್ ಅವರ ಅಧಿಕೃತ ಕಾರ್ಡ್ ಅನ್ನು ಸಹೋದರಿ ನಿಶಾ ಬಳಸಿ ಯಡವಟ್ಟು
Paris Olympics 2024 ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್ ಪಂದ್ಯದಿಂದ ಕುಸ್ತಿಪಟು Vinesh Phogat ವಿನೇಶ್ ಫೋಗಟ್ ಅವರು ಅನರ್ಹಗೊಂಡ ಬೆನ್ನಲ್ಲೇ ಇನ್ನೊಂದು ಆಘಾತ ಎದುರಾಗಿದೆ. ಭಾರತದ ಮತ್ತೊಬ್ಬ ಕುಸ್ತಿಪಟು Antim Panghal ಆಂಟಿಮ್ ಪಂಘಲ್ ಅವರನ್ನು ಅಶಿಸ್ತಿನ ಕಾರಣದಿಂದಾಗಿ ಪ್ಯಾರಿಸ್ನಿಂದ ಗಡೀಪಾರು ಮಾಡಲು ನಿರ್ಧರಿಸಲಾಗಿದೆ.
ಒಲಿಂಪಿಕ್ ಗೇಮ್ಸ್ ವಿಲೇಜ್ಗೆ ಪ್ರವೇಶಿಸಲು ಆಂಟಿಮ್ ಪಂಘಲ್ ಅವರ ಅಧಿಕೃತ ಕಾರ್ಡ್ ಅನ್ನು ಸಹೋದರಿ ನಿಶಾ ಬಳಸಿ ಸಿಕ್ಕಿಬಿದ್ದ ಕಾರಣ ಇದೀಗ ಈ ಶಿಕ್ಷೆಗೆ ಗುರಿಯಾಗಬೇಕಾಗಿದೆ. ಆಟಗಾರರಲ್ಲದವರು ಒಲಿಂಪಿಕ್ ಗೇಮ್ಸ್ ವಿಲೇಜ್ಗೆ ಪ್ರವೇಶಿಸುವಂತಿಲ್ಲ ಅನ್ನೋ ನಿಯಮ ಮುರಿದ ಕಾರಣಕ್ಕಾಗಿ ಆಂಟಿಮ್ ಪಂಘಲ್ ಅವರ ಕುಟುಂಬವನ್ನು ಗಡೀಪಾರು ಮಾಡಲಾಗುವುದು ಎಂದು ಒಲಿಂಪಿಕ್ಸ್ ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಆಂಟಿಮ್ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದು, ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಸೋತ ನಂತರ ಆಂಟಿಮ್ ಪಂಘಲ್ ಗೇಮ್ಸ್ ವಿಲೇಜ್ ತೊರೆದು ತನ್ನ ತರಬೇತುದಾರ ಮತ್ತು ಸಹೋದರಿ ತಂಗಿದ್ದ ಹೋಟೆಲ್ಗೆ ತೆರಳಿದ್ದರು.
ಈ ವೇಳೆ ಅವರು ತನ್ನ ಅಧಿಕೃತ ಐಡಿ ಕಾರ್ಡ್ ಅನ್ನು ಸಹೋದರಿ ನಿಶಾ ಅವರಿಗೆ ನೀಡಿ ಗೇಮ್ಸ್ ವಿಲೇಜ್ಗೆ ತೆರಳಿ ತನ್ನ ಬ್ಯಾಗ್ ತರುವಂತೆ ಸೂಚಿಸಿದ್ದರು. ಅದರಂತೆ ಗೇಮ್ಸ್ ವಿಲೇಜ್ನಿಂದ ನಿಶಾ ಹೊರ ಬರುತ್ತಿದ್ದಾಗ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದರು.
ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತಾದರೂ. ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಆಂಟಿಮ್ ಪಂಘಲ್ ಅವರು ಮತ್ತು ಕುಟುಂಬ ಸದಸ್ಯರನ್ನು ಗಡೀಪಾರು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
Breaking!🚨
— Veena Jain (@DrJain21) August 8, 2024
Indian wrestler Antim Panghal's sister is detained by Paris Police while Antim's accreditation is revoked.
She is expected to be flown back after her sister illegally entered Olympic village using Antim's accreditation card.
What our IOC administrators are doing… pic.twitter.com/KaaIaxx0s9
ಶಿಸ್ತು ಉಲ್ಲಂಘನೆಯ ಬೆನ್ನಲ್ಲೇ ಆಂಟಿಮ್ ಅವರ ಸಹಾಯಕ ಸಿಬ್ಬಂದಿಯನ್ನು ವಾಪಸ್ ಕಳುಹಿಸಲು ಭಾರತೀಯ ಒಲಿಂಪಿಕ್ ಸಂಸ್ಥೆ ನಿರ್ಧರಿಸಿದೆ.
ಈ ನಡುವೆ ಆಂಟಿಮ್ ಅವರ ಸಹಾಯಕ ಸಿಬ್ಬಂದಿ ವಿಕಾಸ್ ಮತ್ತು ಭಗತ್ ಕುಡಿದು ಕ್ಯಾಬ್ನಲ್ಲಿ ಪ್ರಯಾಣಿಸಿದ್ದು ಮಾತ್ರವಲ್ಲದೆ ಕ್ಯಾಬ್ ಬಾಡಿಗೆ ಹಣ ಕೊಡಲು ನಿರಾಕರಿಸಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿದೆ. ಈಗಾಗಲೇ 19 ವರ್ಷದ ಅಂಡರ್ 20 ವಿಶ್ವ ಚಾಂಪಿಯನ್ ಆಂಟಿಮ್ ಅವರನ್ನು ಪೊಲೀಸರು ಕರೆಸಿಕೊಂಡು ಹೇಳಿಕೆ ದಾಖಲಿಸಿದ್ದಾರೆ. ಆದರೆ ಆಂಟಿಮ್ ಮತ್ತು ಅವರ ಸಿಬ್ಬಂದಿ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ಒಟ್ಟಿನಲ್ಲಿ ಇದೇ ಮೊದಲ ಸಲ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ ಎಡವಟ್ಟು ಮಾಡಿಕೊಳ್ಳುವ ಮೂಲಕ ಭವಿಷ್ಯ ಸಾಧನೆಗಳಿಗೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡಂತೆ ಕಾಣಿಸುತ್ತಿದೆ.