ಬೆಂಗಳೂರು : ಮುಖ್ಯಮಂತ್ರಿ ಕುರ್ಚಿಯಿಂದ ಯಡಿಯೂರಪ್ಪ ಇಳಿಯುತ್ತಾರೆ ಅನ್ನುವ ಸುದ್ದಿಗೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಒಂದು ಕಡೆ ಯಡಿಯೂರಪ್ಪನವರು ಹೈಕಮಾಂಡ್ ಸಂಜೆ ಸಂದೇಶ ಕಳುಹಿಸಲಿದೆ, ಆಗ ಎಲ್ಲವೂ ಗೊತ್ತಾಗಲಿದೆ ಅಂದಿದ್ದಾರೆ. ಮತ್ತೊಂದು ಕಡೆ ಗೋವಾದಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಯಡಿಯೂರಪ್ಪ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ರಾಜಕೀಯ ಭಿಕ್ಕಟ್ಟು ಇಲ್ಲ ಅಂದಿದ್ದಾರೆ.
ಹಾಗಾದ್ರೆ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಸ್ತಾಪವನ್ನು ಬಿಜೆಪಿ ಹೈಕಮಾಂಡ್ ಕೈ ಬಿಟ್ಟಿತೇ ಅನ್ನುವ ಅನುಮಾನ ಶುರುವಾಗಿದೆ. ಕಾರಣ ನಡ್ಡಾ ಅವರ ಹೇಳಿಕೆ. ಜೊತೆಗೆ ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆ ಅನ್ನುವ ಸುದ್ದಿಯನ್ನು ತೇಲಿ ಬಿಡುವ ಮೂಲಕ ಹೈಕಮಾಂಡ್ ಟ್ರಯಲ್ ನೋಡಿದೆಯೇ ಅನ್ನುವ ಪ್ರಶ್ನೆಯೂ ಎದ್ದಿದೆ. ಯಡಿಯೂರಪ್ಪ ರಾಜೀನಾಮೆ ಪ್ರಸ್ತಾಪಕ್ಕೆ ಲಿಂಗಾಯತ ವರ್ಗದಿಂದ ತೀವ್ರ ವಿರೋಧ ವ್ಯಕ್ತವಾಗಿರುವುದನ್ನು ಗಮನಿಸಿರುವ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ಮನಸ್ಸು ಮಾಡಿದೆಯೇ ಅನ್ನುವ ಅನುಮಾನವೂ ಶುರುವಾಗಿದೆ.
ಇದಕ್ಕೆ ಪೂರಕವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆಯನ್ನು ಕೊಟ್ಟಿದ್ದಾರೆ.
ಆದರೆ ಬಿಜೆಪಿಯ ಮೂಲಗಳ ಪ್ರಕಾರ ಯಡಿಯೂರಪ್ಪ ರಾಜೀನಾಮೆ ನೀಡುವುದು ಖಚಿತ. ಯಾವಾಗ ರಾಜೀನಾಮೆ ಕೊಡಬೇಕು ಅನ್ನುವ ನಿರ್ಧಾರವನ್ನು ಯಡಿಯೂರಪ್ಪ ಅವರೇ ಕೈಗೊಳ್ಳಬೇಕಾಗಿದೆ. ಹೈಕಮಾಂಡ್ ಯಾವುದೇ ಸಂದೇಶವನ್ನು ರವಾನಿಸುವುದಿಲ್ಲ. ಇದೀಗ ಬಾಲ್ ಯಡಿಯೂರಪ್ಪ ಕೋರ್ಟ್ ನಲ್ಲಿದೆ. ಹೈಕಮಾಂಡ್ ರಾಜೀನಾಮೆಗೆ ಸೂಚಿಸಿದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ. ಬದಲಾಗಿ ಯಡಿಯೂರಪ್ಪ ಅವರೇ ಸ್ಥಾನ ತೊರೆಯುವ ತೀರ್ಮಾನ ಪ್ರಕಟಿಸಿದರೆ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗೋದಿಲ್ಲ. ಇದಕ್ಕಾಗಿ ಪಕ್ಷ ಕಾಯುತ್ತಿದೆ ಅಂದಿದ್ದಾರೆ.
Discussion about this post