KPTCL ಶಾಂತಕುಮಾರಸ್ವಾಮಿ ಪ್ರಕರಣಕ್ಕೆ ಮೇಜರ್ ತಿರುವು
ಪೊಲೀಸರು ರಿವಾಲ್ವರ್ ತೋರಿಸಿ ಬೆದರಿಸುತ್ತಿದ್ದಾರೆ. ಹೊಡೆಯುತ್ತಿದ್ದಾರೆ, ನ್ಯಾಯಾಲಯದಿಂದ ಹೊರಗಡೆ ಹೋಗಲಾರೆ ನಾನು ಅಂದಿದ್ದ KPTCL ನ ಸಾಗರ ವಿಭಾಗದ ಸಹಾಯಕ ಎಂಜಿನಿಯರ್ ಎಂ.ಜಿ. ಶಾಂತಕುಮಾರಸ್ವಾಮಿ ಪ್ರಕರಣಕ್ಕೆ ಗಂಭೀರ ತಿರುವು ಸಿಕ್ಕಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಉಪ ಪೊಲೀಸ್ ಅಧಿಕಾರಿ ವಿರುದ್ಧ ಆರೋಪ ಮಾಡಿದ್ದ ಶಾಂತಕುಮಾರಸ್ವಾಮಿ ವಿರುದ್ಧವೇ ಬುಧವಾರ ಸರ್ಕಾರಿ ವಕೀಲರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಶಾಂತಕುಮಾರಸ್ವಾಮಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿದ್ದಾರೆ. ಆ ಮಹಿಳೆ ನೀಡಿರುವ ದೂರಿನ ಸಂಬಂಧ ಶಾಂತಕುಮಾರಸ್ವಾಮಿ ಆರೋಪಿಯಾಗಿದ್ದು, ಅವರ ವಿರುದ್ಧ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿಎನ್ ಜಗದೀಶ್ ವಿವರಿಸಿದರು. ಇದೇ ವೇಳೆ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಪೊಲೀಸರ ವರದಿಯನ್ನು ಸಲ್ಲಿಸಲಾಯ್ತು.
ಶಾಂತಕುಮಾರ ಸ್ವಾಮಿ ಅವರು ಅಬಕಾರಿ ಇಲಾಖೆಯ ಪೊಲೀಸ್ ಅಧಿಕಾರಿ ಜೊತೆಗೂಡಿ ತಾನು ವಿವಾಹವಾಗಬೇಕಿದ್ದ ಯುವತಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಈ ಸಂಬಂಧ ಅಬಕಾರಿ ಇಲಾಖೆಯ ಅಧಿಕಾರಿ ಮತ್ತು ಶಾಂತಕುಮಾರ ಸ್ವಾಮಿ ನಡುವಿನ ಮಾತುಕತೆಯ ಏಳೆಂಟು ಆಡಿಯೋಗಳು ಲಭ್ಯವಾಗಿವೆ. ಹೀಗಾಗಿ, ಒಪ್ಪಂದ ಮುರಿದು ಬಿದ್ದಿತ್ತು ಎಂದರು.
ಶಾಂತಕುಮಾರ ಸ್ವಾಮಿಗೆ ಯಾವುದೇ ರೀತಿಯಲ್ಲೂ ಪೊಲೀಸರು ಸೇರಿದಂತೆ ಯಾರೂ ಕಿರುಕುಳ ನೀಡಿಲ್ಲ. ಆತನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ದ ವೇಳೆ ಹಾಸಿಗೆಯಿಂದ ಕೆಳಗೆ ಉದ್ದೇಶಪೂರ್ವಕವಾಗಿ ಬಿದ್ದು ರಾದ್ಧಾಂತ ಸೃಷ್ಟಿಸಿದ್ದಾರೆ. ಇದೆಲ್ಲವನ್ನೂ ವಿಡಿಯೋ ಮಾಡಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.
ಈ ವೇಳೆ ಶಾಂತಕುಮಾರಸ್ವಾಮಿಯವರನ್ನು ಉದ್ದೇಶಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ನಿಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಪ್ರಶ್ನಿಸಿ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಯನ್ನು ನೀವೇ ಹಿಂದಕ್ಕೆ ಪಡೆದುಕೊಂಡಿದ್ದೀರಿ.
ಈಗ ನ್ಯಾಯಾಲಯದ ಮುಂದೆ ಯಾವುದೇ ಪ್ರಕರಣವಿಲ್ಲ. ಹೀಗಾಗಿ ನ್ಯಾಯಾಲಯ ಯಾವುದೇ ಕ್ರಮ ಜರುಗಿಸಲು ಬರೋದಿಲ್ಲ. ಹೊಸದಾಗಿ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಬಳಿಕ ನ್ಯಾಯಾಲಯ ನಿಮ್ಮ ವಾದ ಆಲಿಸಲಿದೆ ಅಂದರು.