ಮೈಸೂರು : ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಿಸಲು ಮುಂದಾಗಿರುವುದು ಜೆಡಿಎಸ್ ನಾಯಕರಲ್ಲಿ ಒಂದಿಷ್ಟು ಗಲಿಬಿಲಿ ಮೂಡಿಸಿದೆ ಅನ್ನುವುದು ಸ್ಪಷ್ಟ. ಈಗಾಗಲೇ ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಸಾರಿರುವ ಸಮರ ಯಾವೆಲ್ಲಾ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದೆ ಅನ್ನುವುದು ರಾಜ್ಯದ ಜನತೆಗೆ ಗೊತ್ತಾಗಿದೆ. ಇದೀಗ ಮಂಡ್ಯದಲ್ಲಿ ಅದರಲ್ಲೂ ಮದ್ದೂರಿನಲ್ಲಿ ಸುಮಲತಾ ಸ್ವಂತ ಮನೆ ನಿರ್ಮಿಸುವ ಮೂಲಕ ಮತ್ತೊಂದು ಸಂದೇಶ ರವಾನಿಸಿದ್ದಾರೆ.
ಈ ಹಿಂದೆ ರಮ್ಯ ಕೂಡಾ ಹೀಗೆ ಮನೆ ಮಾಡಿದ್ರು, ಎನಾಯ್ತು ಗೊತ್ತಿಲ್ವ ಅಂದವರಿಗೆ ಖಡಕ್ ಉತ್ತರ ಕೊಟ್ಟಿರುವ ಅಭಿಷೇಕ್ ಅಂಬರೀಶ್ ಹೇಳೋದಿಲ್ಲ, ಮಾಡಿ ತೋರಿಸುತ್ತೇವೆ ಅಂದಿದ್ದಾರೆ. ಈ ಮೂಲಕ ಹೊಸದಾಗಿ ನಿರ್ಮಾಣವಾಗಲಿರುವ ಮನೆ, ಮಂಡ್ಯ ರಾಜಕೀಯ ಇತಿಹಾಸದಲ್ಲೊಂದು ಕ್ರಾಂತಿಯ ಸುಳಿವು ನೀಡಿದೆ.
ಈ ನಡುವೆ ಸುಮಲತಾ ಅವರ ಮನೆ ನಿರ್ಮಾಣದ ಕಾರ್ಯದ ಕುರಿತಂತೆ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಕುಮಾರಸ್ವಾಮಿ, ಬಹಳ ಒಳ್ಳೆಯ ಕೆಲಸ, ನಮಗೂ ಒತ್ತಡ ಕಡಿಮೆಯಾಗುತ್ತದೆ. ಸಂಸದರು ನೇರವಾಗಿ ಜನರಿಗೆ ಸಿಗುತ್ತಾರೆ, ಆದಷ್ಟು ಬೇಗ ಮನೆಯನ್ನು ಕಟ್ಟಿ ಮಂಡ್ಯ ಜಿಲ್ಲೆಯ ಜನತೆಯ ಸಮಸ್ಯೆಯನ್ನು ಬಗೆ ಹರಿಸಲಿಕ್ಕೆ ಅವರು ಕ್ರಮ ಕೈಗೊಂಡ್ರೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸೋಣ ಎಂದು ಶುಭ ಹಾರೈಸಿದ್ದಾರೆ.
ಜೊತೆಗೆ ” ನಾನೇನು ರಾಮನಗರದಲ್ಲಿ ಮನೆ ಮಾಡಿದ್ದೀನಾ, ಚನ್ನಪಟ್ಟಣದಲ್ಲಿ ಮನೆ ಮಾಡಿದ್ದೀನಾ. ಜನಗಳನ್ನು ಭೇಟಿ ಮಾಡುವಂತದ್ದು ನಮ್ಮ ಕೈಯಲ್ಲಿದೆ. ನಾವು ಮನೆ ಮಾಡಿದ ತಕ್ಷಣ ಮನೆಯೊಳಗೆ ಇಲ್ಲದೆ ಜನಗಳ ಕೈಗೆ ಸಿಗದೆ ಹೋದ್ರೆ ಏನಾಗುತ್ತದೆ. ನಿರಂತರವಾಗ ಸಂಪರ್ಕದಲ್ಲಿ ಎಲ್ಲೇ ಇದ್ರು, ಇವತ್ತೇನು ಸಾರಾ ಮಹೇಶ್ ಕೆ ಆರ್ ನಗರದಲ್ಲಿ ಮನೆ ಮಾಡಿದ್ದಾರೆಯೇ. ಮೈಸೂರಿನಿಂದ ಎಲ್ಲಾ ನಿಭಾಯಿಸುತ್ತಿದ್ದಾರೆ. ಮನೆ ಮಾಡಿದ ತಕ್ಷಣ ಎನೋ ಒಂದು ಆಗುತ್ತದೆ ಅಂತ ನಾನು ಹೇಳೋದಿಲ್ಲ. ಆದರೆ ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ ಜನರೊಂದಿಗೆ ನಿರಂತರವಾದ ಸಂಪರ್ಕ, ಕಷ್ಟಗಳನ್ನು ಹೇಳಿಕೊಳ್ಳಲು ಬಂದಾಗ ಸ್ಪಂದಿಸುವ ಭಾವನೆ ಇದ್ರೆ ಅದು ಯಶಸ್ವಿಯಾಗುತ್ತದೆ.
ಇನ್ನು ಕುಮಾರಸ್ವಾಮಿಯ ಶುಭ ಹಾರೈಕೆಗೆ ಪ್ರತಿಕ್ರಿಯಿಸಿರುವ ಸುಮಲತಾ ಅವರು ಮನೆ ಕಟ್ಟುವ ಸಂದರ್ಭದಲ್ಲಿ ಹೃದಯವಂತಿಕೆ ಇರುವವರು ಒಳ್ಳೆಯದಾಗ್ಲಿ ಎಂದು ಹಾರೈಸಿದ್ದಾರೆ, ಧನ್ಯವಾದಗಳು, ನಮ್ಮ ಕೆಲಸ ಎಂದಿಗೂ ಮಾತನಾಡಬೇಕು ಅಂದಿದ್ದಾರೆ.
ಇನ್ನು ಕುಮಾರಸ್ವಾಮಿಯವರು ಹೇಳಿಕೆ ನೋಡಿದ್ರೆ ಅಚ್ಚರಿಯಾಗುತ್ತದೆ. ಇದೇ ಕುಮಾರಸ್ವಾಮಿಯವರು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ರು, ನಿಖಿಲ್ ಮಂಡ್ಯದಲ್ಲಿ ಮನೆ ಮಾಡ್ತೀನಿ ಅಂದಿದ್ರು. ಈ ಎರಡೂ ವಿಷಯಗಳಿಗೂ, ಕುಮಾರಸ್ವಾಮಿ ಇಂದು ಹೇಳಿದ ಮಾತಿಗೂ ಸಂಬಂಧವೇ ಇಲ್ವ..?
Discussion about this post