ಮೈಸೂರು : ಸಿಎಂ ಯಡಿಯೂರಪ್ಪ ಕಾರ್ಯವೈಖರಿ ವಿರುದ್ಧ ಸಿಡಿದೆದ್ದಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ತಮ್ಮ ಹೋರಾಟ ಮುಂದುವರಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಈಶ್ವರಪ್ಪ ತಾವ್ಯಾಕೆ ರಾಜ್ಯಪಾಲರಿಗೆ ಪತ್ರ ಬರೆಯಬೇಕಾಯ್ತು ಅನ್ನುವುದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಯಡಿಯೂರಪ್ಪ ವಿರುದ್ಧ ದೂರು ಕೊಟ್ಟಿಲ್ಲ. ಕೊಡುವುದೂ ಕೂಡಾ ಇಲ್ಲ ಅಂದಿದ್ದಾರೆ.
ಇದೇ ವೇಳೆ ತಮ್ಮ ಖಾತೆಗೆ ಹಣ ಬಿಡುಗಡೆ ಮಾಡುವುದರಲ್ಲಿ ಯಡಿಯೂರಪ್ಪ ತಾರತಮ್ಯ ಮಾಡಿದ್ದಾರೆ ಎಂದು ಮತ್ತೆ ದೂರಿದ ಈಶ್ವರಪ್ಪ, ತಮ್ಮ ಸುತ್ತಮುತ್ತಲಿನ ಮಂದಿಯ ಮಾತು ಕೇಳಿ ಹೀಗಾಗಿರಬೇಕು ಅಂದಿದ್ದಾರೆ. ತಮ್ಮ ಸುತ್ತ ಮುತ್ತಲಿನ ಮಂದಿಯ ಮಾತು ಕೇಳಿಯೇ ಯಡಿಯೂರಪ್ಪ ಹಿಂದೊಮ್ಮೆ ಕೆಟ್ಟಿದ್ದರು ಎಂದು ಕೆಜೆಪಿ ಕಟ್ಟಿದ ಘಟನೆಯನ್ನು ಈಶ್ವರಪ್ಪ ನೆನಪಿಸಿದ್ದಾರೆ.
ಯಡಿಯೂರಪ್ಪ ಅವರು ಕೆಜೆಪಿ ಕಟ್ಟವು ಹೊರಟ ವೇಳೆ ನಾನು, ಬೇಡ ಎಂದು ಸಾರಿ ಸಾರಿ ಹೇಳಿದ್ದೆ. ಆದರೆ ಅವರು ಮಾತು ಕೇಳಲಿಲ್ಲ. ಕೆಜೆಪಿ ಕಟ್ಟಿದ ಮೇಲೆ ಏನಾಯ್ತು. 6 ಸ್ಥಾನಗಳನ್ನು ಅವರು ಗೆದ್ದರು. ಆದರೆ ಅದರಿಂದ ಅವರಿಗೂ ನಷ್ಟವಾಯ್ತು, ಪಕ್ಷಕ್ಕೂ ಹಾನಿಯಾಯ್ತು.
ಇದಾದ ಬಳಿಕ ತಮ್ಮ ಪುತ್ರ ರಾಘವೇಂದ್ರ ಮೂಲಕ ಬಿಜೆಪಿ ಮರಳುವ ಇಂಗಿತವನ್ನು ಯಡಿಯೂರಪ್ಪ ಹೇಳಿ ಕಳುಹಿಸಿದ್ದರು. ಈ ಬಗ್ಗೆ ಡಿಎಚ್ ಶಂಕರಮೂರ್ತಿ ಹಾಗೂ ನಾನು ದೆಹಲಿ ವರಿಷ್ಠರ ಜೊತೆಗೆ ಮಾತನಾಡಿದ್ದೇವು. ಅವರ ಸೂಚನೆ ಯಡಿಯೂರಪ್ಪ ಅವರನ್ನು ಲೆಹರ್ ಸಿಂಗ್ ಮನೆಯಲ್ಲಿ ಭೇಟಿಯೂ ಮಾಡಿದ್ದೇವು. ಆ ವೇಳೆ ತಮ್ಮ ಜೊತೆಗಿದ್ದವರೇ ನನಗೆ ಅನ್ಯಾಯ ಮಾಡಿದರು ಎಂದು ಯಡಿಯೂರಪ್ಪ ಹೇಳಿಕೊಂಡಿದ್ದರು. ಕೆಜೆಪಿಯಿಂದಲೇ ನನ್ನ ಸಿಎಂ ಮಾಡ್ತೀನಿ ಎಂದು ನಂಬಿಸಿದ್ರು. ಪಕ್ಷ ಕಟ್ಟುವಂತೆ ಹುರಿದುಂಬಿಸಿದವರೇ ಕೊನೆ ಘಳಿಗೆಯಲ್ಲಿ ಕೈ ಕೊಟ್ಟರು. ಅವರ ಮಾತು ನಂಬಿ ನಾನು ಕೆಟ್ಟೆ ಎಂದು ಯಡಿಯೂರಪ್ಪ ಹೇಳಿದ್ದನು ಈಶ್ವರಪ್ಪ ನೆನಪಿಸಿಕೊಂಡಿದ್ದಾರೆ.
ಈಗ್ಲೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬರಬೇಕಾಗಿರುವ ಹಣವನ್ನು ನೇರವಾಗಿ ಬಿಡುಗಡೆ ಮಾಡುವ ಕೆಲಸಕ್ಕೆ ಕೈ ಹಾಕಿರುವುದರಲ್ಲಿಯೂ ಸುತ್ತಮುತ್ತಲಿನವರ ಕೈವಾಡ ಕಾಣಿಸುತ್ತಿದೆ. ಕೆಜೆಪಿ ಕಟ್ಟಿದಾಗ ಹೇಳಿದಂತೆ ಸುತ್ತಮುತ್ತಲಿನ ಮಾತನ್ನು ಯಡಿಯೂರಪ್ಪನವರು ಕೇಳದಿರುವುದು ಒಳಿತು ಎಂದು ಈಶ್ವರಪ್ಪ ಮತ್ತೆ ಕಿವಿ ಮಾತು ಹೇಳಿದ್ದಾರೆ.
ಈಶ್ವರಪ್ಪ ಇಂದು ಕೆಜೆಪಿ ಕಥೆಯನ್ನು ಹೇಳಿದ್ದಾರೆ ಅಂದ್ರೆ ಯಡಿಯೂರಪ್ಪ ವಿರುದ್ಧದ ಹೋರಾಟಕ್ಕೆ ಅವರು ಸಜ್ಜಾಗುತ್ತಿದ್ದಾರೆ ಅನ್ನುವುದು ಸ್ಪಷ್ಟ.
Discussion about this post