ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಚುನಾವಣೆ ನಿಂತ ಕ್ಷಣದಿಂದಲೂ ಸದಾ ವಿವಾದಕ್ಕೆ ಗುರಿಯಾಗುತ್ತಲೇ ಬಂದಿದ್ದಾರೆ.
ಈ ನಡುವೆ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಸಂಸದರು, ಸ್ಥಳೀಯರ ಶಾಸಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಂಸದರಾಗಿ ಆಯ್ಕೆಯಾದವರಿಗೆ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಕಚೇರಿಗೆ ಹೊಂದಲು ಅವಕಾಶವಿದೆ. ಈ ಹಿಂದೆ ಸಂಸದರಾಗಿದ್ದ ಅನಂತ ಕುಮಾರ್ ಅವರಿಗೆ ಬಿಬಿಎಂಪಿ ಸೌತ್ ಎಂಡ್ ವೃತ್ತದಲ್ಲಿ ಕಚೇರಿ ವ್ಯವಸ್ಥೆಯನ್ನು ಮಾಡಿಕೊಟ್ಟಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದಿ. ಅನಂತ್ ಕುಮಾರ್ ಬಳಕೆ ಮಾಡುತ್ತಿದ್ದ ಕಚೇರಿಯನ್ನೇ ನೂತನ ಸಂಸದ ಕಚೇರಿಗಾಗಿ ಬಿಬಿಎಂಪಿ ನಿಗದಿ ಮಾಡಿತ್ತು.
ಆದರೆ ಇದನ್ನು ನಿರಾಕರಿಸಿರುವ ತೇಜಸ್ವಿ ಸೂರ್ಯ ಬಿಬಿಎಂಪಿಯ 168ನೇ ವಾರ್ಡ್ನಲ್ಲಿರುವ ಗ್ರಂಥಾಲಯದ ಸ್ಥಳವನ್ನು ನೀಡುವಂತೆ ಬಿಬಿಎಂಪಿಗೆ ಮನವಿ ಮಾಡಿದ್ದಾರೆ. ಸಂಸದರು ಮನವಿ ಮಾಡುತ್ತಿದ್ದಂತೆ, ಈ ಸ್ಥಳವನ್ನು ಸಂಸದ ತೇಜಸ್ವಿ ಸೂರ್ಯ ಅವರ ಕೆಲಸಕಾರ್ಯಗಳಿಗೆ ಬಳಸಲು ಕಾಯ್ದಿರಿಸಲಾಗಿದೆ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.
ತೇಜಸ್ವಿ ಸೂರ್ಯ ಕಚೇರಿಗೆಗಾಗಿ ಬೇಡಿಕೆ ಇಟ್ಟಿರುವ ಸ್ಥಳ ಜನ ಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗಿತ್ತು.
ಮಕ್ಕಳ ಪಾಠ ಕಲಿಕೆಗಾಗಿ ಇರುವ ಕೆಲವೇ ಕೆಲವು ಗ್ರಂಥಾಲಯಗಳಲ್ಲಿ ಇದೂ ಸಹ ಒಂದು. ಇನ್ನು ವಿಜಯ್ ಕಾಲೇಜ್ ಡಿಇಒ ಸಮೀರ್ ಸಿಂಹ ಅವರು ಇಲ್ಲಿ ಮಕ್ಕಳಿಗೆ ಟ್ಯೂಷನ್ ಕೂಡಾ ಮಾಡುತ್ತಿದ್ದರು. ಕೆಲವು ಸಂಘ ಸಂಸ್ಥೆಗಳು ಸುತ್ತಮುತ್ತಲಿನ ಬಡ ಮಕ್ಕಳಿಗೆ ಎಸ್ಎಸ್ಎಲ್ಸಿ ಟ್ಯೂಷನ್ ಮಾಡಲು ಈ ಕಟ್ಟಡವನ್ನು ಉಪಯೋಗಿಸುತ್ತಿದ್ದವು.
ಆದರೆ ಇದೀಗ ತೇಜಸ್ವಿ ಸೂರ್ಯ ಇಲ್ಲಿ ಸಂಸದರ ಕಚೇರಿ ಪ್ರಾರಂಭಿಸಿದ್ದಾರೆ ಈ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಬೀಳುತ್ತದೆ.
ಹಾಗೇ ನೋಡಿದರೆ ಅನಂತ ಕುಮಾರ್ ಅವರು ಬಳಸುತ್ತಿದ್ದ ಕಚೇರಿಯನ್ನೇ ತೇಜಸ್ವಿ ಸೂರ್ಯ ಬಳಸಬಹುದಾಗಿತ್ತು. ಆದರೆ ಅದ್ಯಾಕೆ ಈ ನಿರ್ಧಾರ ಕೈಗೊಂಡರೋ ಗೊತ್ತಿಲ್ಲ. ಈ ಬಗ್ಗೆ ತೇಜಸ್ವಿ ಸೂರ್ಯ ಬಹಿರಂಗವಾಗಿ ಏನೂ ಹೇಳಿಲ್ಲ. ಈ ಬಗ್ಗೆ ಮೋದಿ ಹಾಗೂ ಅಮಿತ್ ಶಾ ಅವರಿಗೆ ಟ್ವೀಟರ್ ಮೂಲಕ ದೂರು ಕೊಡುವುದೇ ಬೆಟರ್.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಯನಗರ ಶಾಸಕಿ ಸೌಮ್ಯ ರೆಡ್ಡಿ, ತೇಜಸ್ವಿ ಸೂರ್ಯ ನಡೆಯನ್ನು ಖಂಡಿಸಿದ್ದಾರೆ. ತಾವು ಜಯನಗರದ ಸ್ಥಳೀಯ ಶಾಸಕಿ. ಜಯನಗರ ವ್ಯಾಪ್ತಿಗೆ ಬರುವ ಬಿಬಿಎಂಪಿ ಕಟ್ಟಡದಲ್ಲಿ ಕಚೇರಿ ಪ್ರಾರಂಭಿಸುವ ಬಗ್ಗೆ ಸಂಸದರು ವಿಚಾರವನ್ನು ತಮ್ಮ ಗಮನಕ್ಕೆ ತಾರದೇ ನೇರವಾಗಿ ಬಿಬಿಎಂಪಿ ಆಯುಕ್ತರಿಂದಲೇ ಕಚೇರಿಯನ್ನು ನಿಗದಿ ಮಾಡಿಸಿಕೊಂಡಿದ್ದಾರೆ. ನಾನು ವಿಜಯ್ ಕುಮಾರ್ ಅವರು ಬಳಸುತ್ತಿದ್ದ ಶಾಸಕರ ಕಚೇರಿಯನ್ನೇ ಬಳಸುತ್ತಿದ್ದೇನೆ. ಅನಂತ್ ಕುಮಾರ್ ಅವರ ಕಚೇರಿ ಚೆನ್ನಾಗಿಯೆ ಇದೆ. ಅದನ್ನೇ ತೇಜಸ್ವಿ ಸೂರ್ಯ ಬಳಸಬಹುದಿತ್ತು. ಆದರೆ ಹೀಗೆ ಏಕೆ ಗ್ರಂಥಾಲಯವಿರುವ ಜಾಗದಲ್ಲಿ ಕಚೇರಿಯನ್ನು ಪ್ರಾರಂಭಿಸುತ್ತಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
Discussion about this post