ಬೆಂಗಳೂರು : ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗೋದಿಲ್ಲ ಅನ್ನುವ ಮಾತುಗಳಿತ್ತು. ತಮ್ಮ ಹಾಗೂ ತಮ್ಮ ಮಕ್ಕಳ ಕ್ಷೇತ್ರದ ಬಗ್ಗೆ ಮಾತ್ರ ಅವರು ತಲೆ ಕೆಡಿಸಿಕೊಳ್ಳಲಿದ್ದಾರೆ ಅನ್ನಲಾಗಿತ್ತು. ಆದರೆ ಯಡಿಯೂರಪ್ಪ ಅವರ ನಡೆ ನೋಡಿದರೆ ಮುಂದಿನ ಚುನಾವಣೆಯಲ್ಲೂ ಅವರದ್ದೇ ನಾಯಕತ್ವ ಬಿಜೆಪಿಗೆ ಅನಿವಾರ್ಯವಾಗಲಿದೆ ಅನ್ನುವುದರಲ್ಲಿ ಅನುಮಾನವಿಲ್ಲ
ಈ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂದು ಘೋಷಿಸಿದ್ದರು. ಆಗ ಅದಕ್ಕೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಮುಂದಿನ ಚುನಾವಣೆಯನ್ನು ಮೋದಿಯ ವರ್ಚಸ್ಸಿನಿಂದ ಮಾತ್ರ ಗೆಲ್ಲಲು ಸಾಧ್ಯವಿಲ್ಲ, ಈಗಾಗಲೇ ಡಿಕೆ ಶಿವಕುಮಾರ್ ಆಪರೇಷನ್ ಹಸ್ತ ಶುರು ಮಾಡಿದ್ದಾರೆ ಅನ್ನುವ ಮೂಲಕ ಅಮಿತ್ ಶಾ ಅವರ ಅವತ್ತಿನ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ನೆಟ್ ವರ್ಕ್ ಏನು ಅನ್ನುವುದನ್ನೂ ಸಾಬೀತು ಮಾಡಿದ್ದಾರೆ. ಈ ಮೂಲಕ ಮುಂದಿನ ಚುನಾವಣೆ ಯಾರ ನಾಯಕತ್ವದಲ್ಲಿ ನಡೆಯಬೇಕಾಗಬಹುದು ಅನ್ನುವುದನ್ನು ಸೂಚ್ಯವಾಗಿ ಪ್ರಸ್ತಾಪಿಸಿದ್ದಾರೆ.
ಡಿಕೆಶಿಯವರ ಆಪರೇಷನ್ ಹಸ್ತದ ಕುರಿತಂತೆ ರಾಜ್ಯದ ಅದ್ಯಾವ ಬಿಜೆಪಿ ನಾಯಕರಿಗೂ ಸಿಗದ ಮಾಹಿತಿ ಯಡಿಯೂರಪ್ಪ ಅವರಿಗೆ ಸಿಕ್ಕಿದೆ. ಹಾಗೇ ನೋಡಿದರೆ ಈ ಮಾಹಿತಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ ಸಿಕ್ಕಿರಬೇಕಿತ್ತು. ಗುಪ್ತಚರ ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಿಗಬೇಕಿತ್ತು, ಆದರೆ ಅವರಿಬ್ಬರಿಗೆ ಸಿಗದ ಮಾಹಿತಿ ಯಡಿಯೂರಪ್ಪ ಅವರಿಗೆ ಸಿಕ್ಕಿದೆ ಅಂದ್ರೆ ಯಡಿಯೂರಪ್ಪ ಅವರ ರಾಜಕೀಯ ತಂತ್ರಗಾರಿಕೆಯನ್ನು ಕೇಂದ್ರ ನಾಯಕರು ಅರ್ಥಮಾಡಿಕೊಳ್ಳಲೇಬೇಕಿದೆ.
ಇನ್ನು ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನಮ್ಮ ತಂತ್ರಗಾರಿಕೆಯನ್ನು ನಾವು ಮಾಡುತ್ತೇವೆ, ನಮ್ಮ ನಡೆಯ ಗುಟ್ಟನ್ನು ನಾವು ಬಿಟ್ಟುಕೊಡುವುದಿಲ್ಲ. ಬಿಜೆಪಿಯವರನ್ನು ಯಾರೆಲ್ಲಾ ಸಂಪರ್ಕಿಸಿದ್ದಾರೆ ಅನ್ನುವ ಕುರಿತಂತೆ ಮೊದಲು ವಿಷಯ ಬಹಿರಂಗವಾಗಲಿ ಅಂದಿದ್ದಾರೆ. ಬಳಿಕ ನಾನು ಮಾತನಾಡುತ್ತೇನೆ ಅಂದಿದ್ದಾರೆ.
Discussion about this post