ಬೆಂಗಳೂರು : ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಹಾರ, ತುರಾಯಿಗೆ ನಿಷೇಧಿಸಿ ಆದೇಶ ಹೊರಡಿಸಿದ್ದರು. ಜೊತೆಗೆ ಪೊಲೀಸ್ ಗೌರವ ವಂದನೆ ಸಂಪ್ರದಾಯಕ್ಕೂ ಬ್ರೇಕ್ ಹಾಕಿದ್ದರು. ಮಾತ್ರವಲ್ಲದೆ ಬೆಂಗಳೂರಿನಲ್ಲಿ ಝೀರೋ ಟ್ರಾಫಿಕ್ ಭಾಗ್ಯಕ್ಕೂ ಬ್ರೇಕ್ ಹಾಕಿದ್ದಾರೆ. ಈ ಕ್ರಾಂತಿಕಾರಿ ಹೆಜ್ಜೆಗಳು ಜನರಿಗೆ ತುಂಬಾ ಇಷ್ಟವಾಗಿದೆ. ಚಿಕ್ಕ ಚಿಕ್ಕ ವಿಷಯಗಳು ದೊಡ್ಡ ಖುಷಿ ಕೊಡುತ್ತದೆ ಅಂತಾರಲ್ಲ ಹಾಗೇ ನೂತನ ಸಿಎಂ ಕಾರ್ಯವೈಖರಿ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ..
ಇದೀಗ ಸಿಎಂ ಭೇಟಿಗೆ ಬರುವ ಸಾರ್ವಜನಿಕರು ಮೊಬೈಲ್ ತಾರದಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಆರ್ ಟಿ ನಗರದ ಬೊಮ್ಮಾಯಿ ನಿವಾಸದಲ್ಲಿ ಬೋರ್ಡ್ ಕೂಡಾ ನೇತು ಹಾಕಲಾಗಿದೆ. ಸಿಎಂ ಭೇಟಿಗೆ ಹೋಗುವ ಸಾರ್ವಜನಿಕರು ಮೊಬೈಲ್ ಅನ್ನು ಸಿಬ್ಬಂದಿ ಬಳಿಯೇ ನೀಡಿ ಹೋಗಬೇಕು. ಯಾವುದೇ ಮೊಬೈಲ್ ಜೊತೆಗೆ ಸಿಎಂ ಅವರನ್ನು ಭೇಟಿಯಾಗುವಂತಿಲ್ಲ.
ಭೇಟಿಗೆ ಬರುವ ಸಾರ್ವಜನಕಿರು ಸೆಲ್ಫಿ, ವಿಡಿಯೋ ಎಂದು ಕಾಲಹರಣ ಮಾಡುತ್ತಾರೆ, ಇದರಿಂದ ತೊಂದರೆಯಾಗುತ್ತದೆ. ಜೊತೆಗೆ ಅನಗತ್ಯ ವಿಡಿಯೋಗಳು ಕೂಡಾ ಸೋಷಿಯಸ್ ಮೀಡಿಯಾಗಳಲ್ಲಿ ಓಡಾಡುತ್ತಿರುತ್ತದೆ. ಹೀಗಾಗಿ ಇದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಅನ್ನಲಾಗಿದೆ.
ಈ ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಕೂಡಾ, ಡಾಲರ್ಸ್ ಕಾಲನಿಯ ತಮ್ಮ ಮನೆಗೆ ಭೇಟಿಗೆ ಬರುವ ಕಾರ್ಯಕರ್ತರು, ಮುಖಂಡರು ಮೊಬೈಲ್ ತರಬಾರದೆಂದು ಆದೇಶ ಹೊರಡಿಸಿದ್ದರು.
Discussion about this post