ಬೆಂಗಳೂರು : ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆಯ ಸರ್ಕಸ್ ನೋಡಿದ ಜನ ಛೀ..ಥೂ ಎಂದು ಉಗಿಯೋದು ಬಾಕಿ. ಒಂದು ಕಡೆ ಯಡಿಯೂರಪ್ಪ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟ ಮಿತ್ರ ಮಂಡಳಿಗೆ ಸಿಕ್ಕಾಪಟ್ಟೆ ಅನ್ಯಾಯವಾಗಿದೆ. ಯಡಿಯೂರಪ್ಪ ತೋರಿಸಿದ ಮಂತ್ರಿ ಆಸೆಗೆ ಪಕ್ಷ ಬಿಟ್ಟು ಬಂದವರು ಇದೀಗ ಗೋಡೆಗೆ ತಲೆ ಬಡಿದುಕೊಳ್ಳುವುದಷ್ಟೇ ಉಳಿದಿದೆ.
ಮತ್ತೊಂದು ಕಡೆ ಯಡಿಯೂರಪ್ಪ ತಮಗೆ ನಿಷ್ಟೆ ತೋರದ ಮಂತ್ರಿಗಳ ಖಾತೆಗಳನ್ನು ಅದಲು ಬದಲು ಮಾಡುವ ಮೂಲಕ ರಾಜಾ ಹುಲಿ ತಾಕತ್ತು ಏನು ಅನ್ನುವುದನ್ನು ತೋರಿಸಲು ಹೊರಟಿದ್ದಾರೆ.
ಈ ನಡುವೆ ತಮಗೆ ಸಿಕ್ಕಿರುವ ಅಬಕಾರಿ ಖಾತೆಯನ್ನು ನಿರಾಕರಿಸುವ ಕೋಟಿ ಕುಳ ಖ್ಯಾತಿಯ ಎಂಟಿಬಿ ನಾಗರಾಜ್ ಜನರಿಗೆ ಎಣ್ಣೆ ಕುಡಿಸುವ ಖಾತೆ ನನಗೆ ಬೇಕಾಗಿಲ್ಲ. ಆ ಪಾಪದ ಕಾರ್ಯವನ್ನು ನಾನು ಮಾಡಲಾರೆ, ಹೀಗಾಗಿ ದಯವಿಟ್ಟು ಖಾತೆ ಬದಲಾಯಿಸಿಕೊಡಿ ಎಂದು ಎಂಟಿಬಿ ನಾಗರಾಜ್ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದಾರೆ.
ಜನರಿಗೆ ಎಣ್ಣೆ ಕುಡಿಸುವ ಖಾತೆಯನ್ನು ನಾನು ಹೊಂದುವುದು ನನ್ನ ಕುಟುಂಬ ಸದಸ್ಯರಿಗೆ ಇಷ್ಟವಿಲ್ಲ, ಹೀಗಾಗಿ ಪಾಪದ ಕಾರ್ಯ ಮಾಡಲು ಮನೆಯವರು ಕೂಡಾ ಒಪ್ಪುತ್ತಿಲ್ಲ. ಈ ಕಾರಣದಿಂದ ಅದೊಂದು ಖಾತೆ ನನಗೆ ಬೇಡ ಎಂದು ಎಂಟಿಬಿ ಬಹಿರಂಗವಾಗಿಯೇ ಹೇಳಿದ್ದಾರೆ.
ಇನ್ನು ಎಂಟಿಬಿ ನಾಗರಾಜ್ ಅವರು ವಸತಿ ಖಾತೆಯ ಮೇಲೆ ಕಣ್ಣಿಟ್ಟಿದ್ದು, ಆ ಖಾತೆಯನ್ನು ಪಡೆಯುವ ಮೂಲಕ ಕ್ಷೇತ್ರದಲ್ಲಿ ಜನರಿಗೆ ಹತ್ತಿರವಾಗೋದು ಅವರ ಉದ್ದೇಶ. ಆದರೆ ಸೋಮಣ್ಣ ಹೊಂದಿರುವ ಖಾತೆಯನ್ನು ಕಿತ್ತುಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗಿದೆ.
Discussion about this post