ಮಂಗಳೂರು : ಭವಿಷ್ಯದ ಸತ್ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಆದರೆ ಬದಲಾದ ಕಾಲಘಟ್ಟದಲ್ಲಿ ಶಿಕ್ಷಕ ವೃತ್ತಿ ಅನ್ನುವುದು ಕೇವಲ ವೃತ್ತಿಯಾಗಿ ಉಳಿದುಕೊಂಡಿದೆ. ಹಿಂದೆಲ್ಲಾ ಹಾಗಿರಲಿಲ್ಲ ಶಿಕ್ಷಕರು ಅಂದ್ರೆ ಅವರು ಸಮಾಜ ಸುಧಾರಕರಾಗಿದ್ದರು. ತನ್ನ ಮನೆಯ ಸಮಸ್ಯೆಯನ್ನು ಸೈಡಿಗಟ್ಟು ಊರ ಮಕ್ಕಳ ಹಿತಕಾಯುವ ದೇವರಾಗಿದ್ದರು. ಆದ್ರೆ ಈಗ್ಲೂ ಅಂತಹ ಶಿಕ್ಷಕರಿಲ್ಲವೇ ಖಂಡಿತಾ ಇದ್ದಾರೆ. ಹುಡುಕುತ್ತಾ ಹೋದ್ರೆ ಇಂತಹ ನೂರಾರು ಶಿಕ್ಷಕರು ಸಿಗುತ್ತಾರೆ. ಅಂತಹುದರಲ್ಲಿ ಒಬ್ಬರು ಬೆಳ್ತಂಗಡಿ ತಾಲೂಕಿನ ಕಾಣಿಕೆ ಡಬ್ಬಿ ಮೇಷ್ಟ್ರು.
ಬೆಳ್ತಂಗಡಿ ತಾಲೂಕಿನ ಕಟ್ಟದಬೈಲು ಶಾಲೆ ಶಿಕ್ಷಕರ ಕೊರತೆ, ಕುಸಿಯುವ ಭೀತಿಯಲ್ಲಿದ್ದ ಕಟ್ಟಡದ ಚಾವಣಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ ಮುಚ್ಚುವ ಹಂತ ತಲುಪಿತ್ತು. ಈ ವೇಳೆ ದೇವದೂತರಂತೆ ಬಂದವರು ಶಿಕ್ಷಕ ಎಡ್ವರ್ಡ್ ಡಿಸೋಜಾ. ಶಾಲೆಗೆ ಮರು ಜೀವ ನೀಡಬೇಕು ಅನ್ನುವ ಗುರಿಯನ್ನಿಟುಕೊಂಡೇ ಸ್ವ ಇಚ್ಛೆಯಿಂದ ಇಲ್ಲಿಗೆ ವರ್ಗಾವಣೆ ಬಯಸಿದ ಅವರು 2003ರ ಜುಲೈ 15 ರಂದು ಸೇರ್ಪಡೆಗೊಂಡರು.
ಹೀಗೆ ಬಂದವರೇ ಮೊದಲು ಶಾಲೆಗೆ ಮರುಜೀವ ಕೊಡುವ ಪಣತೊಟ್ಟರು. ಇದಕ್ಕಾಗಿ ದೇಣಿಗೆ ಸಂಗ್ರಹಿಸಿದ ರೀತಿಯೇ ವಿಭಿನ್ನ ಮತ್ತು ವಿಶಿಷ್ಟ. ಮೊದಲು ಊರಿನ ಪ್ರತಿಯೊಂದು ಮನೆಗೂ ಕಾಣಿಕೆ ಡಬ್ಬಿ ನೀಡಿ ಶಾಲೆಗಾಗಿ ದಿನಕ್ಕೊಂದು ರೂಪಾಯಿ ನೀಡುವಂತೆ ಮನವಿ ನೀಡಿದರು. ತಮ್ಮ ಮನೆಯಲ್ಲೂ ಕಾಣಿ ಡಬ್ಬಿ ಇಟ್ಟು ಅದಕ್ಕೆ 11 ರೂಪಾಯಿ ಕಾಣಿಕೆ ಹಾಕತೊಡಗಿದರು. ಈ 11 ರೂಪಾಯಿ ಸಲುವಾಗಿ ಬಸ್ ಹತ್ತಲಿಲ್ಲ. ಐದಾರು ಕಿ.ಮೀ.ದೂರ ನಿತ್ಯ ನಡೆದು ಆ ಉಳಿತಾಯದ 11 ರೂ.ಗಳನ್ನು ಪ್ರತಿದಿನ ಡಬ್ಬಿಗೆ ಹಾಕಿದರು.
ಹೀಗೆ ಕಾಣಿಕೆ ಡಬ್ಬಿಯಿಂದ 1,071 ದಿನಗಳಲ್ಲಿ ರೂ. 3,33,333 ಸಂಗ್ರಹವಾಯ್ತು. ಜೊತೆಗೆ ಉಳಿದ ಹಣಕ್ಕಾಗಿ ಊರ ಪರವೂರ ದಾನಿಗಳು, ಜನಪ್ರತಿನಿಧಿಗಳು, ಇಲಾಖೆ ಸಹೋದ್ಯೋಗಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಹೀಗೆ ಎಲ್ಲೆಲ್ಲಿ ಧನ ಸಹಾಯ ಸಿಗಬಹುದೋ ಅಲ್ಲಿ ಪ್ರಯತ್ನಿಸಿ 1 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಶಾಲೆಯನ್ನು ಅಭಿವೃದ್ಧಿ ಪಡಿಸಿದರು. ಈ ಮೂಲಕ ಶಾಲೆಯ ಭಾಗ್ಯದ ಬಾಗಿಲು ತೆರೆಯಿತು.
ಇನ್ನು ಈ ಕಾಣಿಕೆ ಡಬ್ಬಿ ಸಂಪ್ರದಾಯ ಈಗ್ಲೂ ಮುಂದುವರಿದಿದ್ದು ಹಣವನ್ನು ವಿದ್ಯಾರ್ಥಿಗಳ ಪುಸ್ತಕ ವಿತರಣೆ, ಬ್ಯಾಗ್ ವಿತರಣೆ, ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ ಭಾವೈಕ್ಯತಾ ಹೊರಸಂಚಾರ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ. ಜೊತೆಗೆ ಶಿಕ್ಷಕರ ಕೊರತೆ ನೀಗಿಸಲು ಗೌರವ ಶಿಕ್ಷಕರನ್ನು ನೇಮಿಸಿ ಇವರಿಗೆ ವೇತನವನ್ನು ನೀಡುವ ಉದ್ದೇಶದಿಂದ ವಜ್ರ ನಿಧಿ ಎಂಬ ಯೋಜನೆ ಹಾಕಿಕೊಂಡರು.
ಶಾಲಾ ವಾರ್ಷಿಕೋತ್ಸವದಲ್ಲಿ 5 ರೂ. ಮುಖಬೆಲೆಯ ಅದೃಷ್ಟ ಚೀಟಿ ಮಾರಾಟ ಮಾಡಿ ಜೊತಗೆ 60 ದಾನಿಗಳಿಂದ ದಿನಕ್ಕೆ 3 ರೂ.ನಂತೆ ಸಂಗ್ರಹಿಸಿ 400 ದಿನಗಳಲ್ಲಿ 1,200 ರೂ. ಸಂಗ್ರಹಿಸಿ ಪರವೂರ ದಾನಿಗಳಿಂದ 4,44,444 ರೂ. ಸಂಗ್ರಹಿಸಿ ವಜ್ರಮಹೋತ್ಸವದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿದರು. ಇದರಿಂದ ವಾರ್ಷಿಕ ರೂ. 60,000 ದಂತೆ ನಿರಂತರ 15 ವರ್ಷಗಳಲ್ಲಿ ಗೌರವ ಶಿಕ್ಷಕರಿಗೆ ಸಂಭಾವನೆ ನೀಡಲಾಗುತ್ತಿದೆ. ಇನ್ನು ವಜ್ರ ನಿಧಿ ಯೋಜನೆ ಕಾಣಿಕೆ ಡಬ್ಬಿ ಮೇಷ್ಟ್ರು ಕೊಟ್ಟ ಮೊತ್ತ 22,222 ರೂಪಾಯಿ.
ಅಷ್ಟಕ್ಕೆ ಎಡ್ವರ್ಡ್ ಡಿಸೋಜಾ ಅವರ ಕಾರ್ಯ ನಿಲ್ಲಲಿಲ್ಲ, ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ಓರ್ವ ಗೌರವ ಶಿಕ್ಷಕಿ ಉದ್ಯೋಗ ಕಳೆದುಕೊಂಡ ಬಳಿಕ ಮಾಸಿಕ ರೂ 1,000 ಪಿಂಚಣಿ ನೀಡುವ ವ್ಯವಸ್ಥೆಯನ್ನೂ ವಜ್ರ ಸಂಜೀವಿನಿ ಮೂಲಕ ಮಾಡಿದ್ದಾರೆ. ಇದಕ್ಕಾಗಿ 10 ತಿಂಗಳು ಮಾಸಿಕ 500 ರೂಪಾಯಿಗಳನ್ನು ಅವರಿಂದ ಕಟ್ಟಿಸಿ ಎರಡು ತಿಂಗಳು ಇವರು ಅವರ ಕಂತನ್ನು ಕಟ್ಟುವುದರ ಮೂಲಕ ವಾರ್ಷಿಕ ರೂ. 3,000 ದಂತೆ ಒಟ್ಟು 33,000 ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಿದ್ದಾರೆ. ಹೀಗೆ ಇವರ ಸಾಧನೆಯ ಪಟ್ಟಿ ಬೆಳೆಯುತ್ತದೆ.
ಇನ್ನು ಶಾಲೆಯ ಏಳಿಗೆ ಮಾತ್ರವಲ್ಲದೆ ಊರಿನ ಏಳಿಗೆಯ ಬಗ್ಗೆಯೂ ತುಡಿಯುತ್ತಿರುವ ಇವರು 2011ರಿಂದ ಶಾಲೆಯ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ 200 ಕುಟುಂಬಗಳಲ್ಲಿ ಹೆಚ್ಚಿನವರಿಗೆ ಪ್ಲಾಸ್ಟಿಕ್ ಸುಡದಂತೆ ,ಅಲ್ಲಲ್ಲಿ ಎಸೆಯದಂತೆ ಮನವರಿಕೆ ಮಾಡಿದ್ದಾರೆ. ನೂರಾರು ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಗಳನ್ನು ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸುವ ಮೂಲಕ ಸ್ವಚ್ಛ ಭಾರತದ ಕಲ್ಪನೆಯನ್ನೇ ಅಂದೇ ಸಾಕಾರಗೊಳಿಸಿದ್ದಾರೆ.
ಇಂತಹ ಶಿಕ್ಷಕ ಎಡ್ವರ್ಡ್ ಡಿಸೋಜಾ ಅವರಿಗೆ 2021ರ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.
ಮಾಹಿತಿ : ಲಕ್ಷ್ಮೀ ಮಚ್ಚಿನ ಪತ್ರಕರ್ತರು
Discussion about this post