ಮಂಗಳೂರು : ಲಸಿಕೆ ಪಡೆಯದಿದ್ರೆ ರೇಷನ್ ಇಲ್ಲ, ಪೆನ್ಸನ್ ಇಲ್ಲ ಎಂದು ತಲೆಯಲ್ಲಿ ಲದ್ದಿ ತುಂಬಿದ ಅಧಿಕಾರಿಗಳು ಹೊರಡಿಸಿದ ಆದೇಶ ಅನೇಕ ಯಡವಟ್ಟುಗಳಿಗೆ ಕಾರಣವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿದ್ದು, ಜನ ಲಸಿಕೆ ಪಡೆಯುತ್ತಿಲ್ಲ ಅಂದಾಗ ಇಂತಹ ಆದೇಶ ಹೊರಡಿಸುವುದರಲ್ಲಿ ಅರ್ಥವಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಬೆಳಗ್ಗೆ ಹೋಗಿ ಕ್ಯೂ ನಿಂತವರಿಗೆ ಲಸಿಕೆ ಸಿಗೋದಿಲ್ಲ ಅಂದ ಮೇಲೆ ಲಸಿಕೆ ಹಾಕಿಸಿಲ್ಲ ಅಂದ್ರೆ ರೇಷನ್ ಕೊಡೋದಿಲ್ಲ ಅನ್ನುವುದು ಅಧಿಕಾರಿಗಳ ಮೂರ್ಖತನವೇ ಸರಿ.
ಹೀಗೆ ಅಧಿಕಾರಿಗಳು ಹೊರಡಿಸಿದ ಆದೇಶದಿಂದ ಭಯಗೊಂಡ ವ್ಯಕ್ತಿಯೊಬ್ಬರು ಒಂದೇ ನಿಮಿಷದ ಅಂತರದಲ್ಲಿ ಎರಡು ಡೋಸ್ ಲಸಿಕೆ ಪಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ವರದಿಯಾಗಿದೆ. ಸುಳ್ಯ ತಾಲೂಕಿನ ದುಗ್ಗಲಡ್ಕ ಗ್ರಾಮದಲ್ಲಿ ಈ ಘಟನೆ ಬುಧವಾರ ನಡೆದಿದೆ.
ಬುಧವಾರ ಈ ಗ್ರಾಮ ವ್ಯಾಪ್ತಿಯಲ್ಲಿ ಮೆಗಾ ಲಸಿಕಾ ವಿತರಣಾ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು. ಸಾಕಷ್ಟು ಜನ ಕೂಡಾ ಆಗಮಿಸಿದ್ದರು. ಈ ವೇಳೆ ಗ್ರಾಮದ ವ್ಯಕ್ತಿಯೊಬ್ಬರು ಮೊದಲ ಡೋಸ್ ಪಡೆದ ಬಳಿಕ ಲಸಿಕಾ ಕೊಠಡಿಯಿಂದ ವಿಶ್ರಾಂತಿ ಕೊಠಡಿಗೆ ತೆರಳಿರಲಿಲ್ಲ. ಒತ್ತಡ ಸಾಕಷ್ಟಿದ್ದ ಕಾರಣ ಲಸಿಕೆ ನೀಡುತ್ತಿದ್ದ ನರ್ಸ್ ಇದೇ ವ್ಯಕ್ತಿಗೆ ಮತ್ತೊಂದು ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಚುಚ್ಚಿದ್ದಾರೆ. ಸೂಜಿ ಹೊರ ತೆಗೆಯಬೇಕು ಅನ್ನುವಷ್ಟರಲ್ಲಿ ಮಾಡಿರುವ ಯಡವಟ್ಟು ನರ್ಸ್ ಗೆ ಗೊತ್ತಾಗಿದೆ. ತಕ್ಷಣ ಎಚ್ಚೆತ್ತುಕೊಂಡು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ.
ಹೀಗಾಗಿ ಏಕ ಕಾಲಕ್ಕೆ ಎರಡು ಡೋಸ್ ಲಸಿಕೆ ಪಡೆದ ವ್ಯಕ್ತಿಯನ್ನು 3 ಗಂಟೆಗಳ ಕಾಲ ಲಸಿಕಾ ಕೇಂದ್ರದಲ್ಲೇ ಇರಿಸಲಾಗಿತ್ತು. ಯಾವುದೇ ಅಡ್ಡ ಪರಿಣಾಮಗಳು ಕಂಡು ಬಾರದ ಕಾರಣ ಅವರನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಆರೋಗ್ಯ ಅಧಿಕಾರಿಗಳು ಈ ವ್ಯಕ್ತಿಯ ಮೇಲೆ 24 ಗಂಟೆಗಳ ಕಾಲ ನಿಗಾ ವಹಿಸಿದ್ದು, ಯಾವುದೇ ತೊಂದರೆಗಳು ಕಾಣಿಸಿಲ್ಲ. ಅವರು ಎಂದಿನಂತೆ ಆರೋಗ್ಯವಾಗಿರುವುದು ಅಧಿಕಾರಿಗಳ ನೆಮ್ಮದಿಗೆ ಕಾರಣವಾಗಿದೆ.
ಇನ್ನು ಈ ಘಟನೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಪ್ರತಿಕ್ರಿಯಿಸಿದ್ದು, ಲಸಿಕೆ ಪಡೆದ ತಕ್ಷಣ ಅವರು ವಿಶ್ರಾಂತಿ ಕೊಠಡಿಗೆ ತೆರಳಬೇಕಿತ್ತು. ಆದರೆ ಹೋಗಿರಲಿಲ್ಲ. ಹೀಗಾಗಿ ಲಸಿಕೆ ನೀಡುವವರು ಮತ್ತೊಂದು ಡೋಸ್ ಕೊಟ್ಟಿದ್ದಾರೆ. ಇದು ನಿರ್ಲಕ್ಷ್ಯದಿಂದ ಆಗಿರುವ ಘಟನೆಯಲ್ಲ. ಜೊತೆಗೆ ಈ ವ್ಯಕ್ತಿ ಪೂರ್ತಿಯಾಗಿ ಲಸಿಕೆ ( ಎರಡು ಡೋಸ್ ) ಹಾಕಿಸಿಲ್ಲ ಅಂದ್ರೆ ರೇಷನ್, ಪೆನ್ಸನ್ ಸಿಗೋದಿಲ್ಲ ಎಂದು ನಂಬಿದ್ದರು. ಹೀಗಾಗಿ ಎರಡು ಸಲ ಲಸಿಕೆ ಪಡೆಯಬೇಕು ಅನ್ನುವುದು ಅವರ ಭಾವನೆಯಾಗಿತ್ತು. ಇನ್ನು 84 ದಿನ ಕಳೆದ ಬಳಿಕ ಅವರಿಗೆ ಮತ್ತೊಂದು ಡೋಸ್ ಲಸಿಕೆ ನೀಡುವುದಾಗಿ ಹೇಳಿದ್ದಾರೆ.
Discussion about this post