ಮಂಗಳೂರು : ಲೋ ಬಿಪಿಯ ಕಾರಣದಿಂದ ಬಸ್ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಬಸ್ ಚಾಲಕ ಕುಸಿದು ಬಿದ್ದ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ನಲ್ಲಿ ನಡೆದಿದೆ. ತನ್ನ ಕಣ್ಣು ಮಂಜಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಚಾಲಕ ಬಸ್ ಅನ್ನು ನಿಲ್ಲಿಸಿ, ಇಂಜಿನ್ ಕೂಡಾ ಆಫ್ ಮಾಡಿದ್ದಾರೆ ಹೀಗಾಗಿ ದೊಡ್ಡ ದುರ್ಘಟನೆಯೊಂದು ತಪ್ಪಿದೆ.
ಪುತ್ತೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಅನ್ನು ಸಂತೋಷ್ ಅನ್ನುವವರು ಚಲಾಯಿಸುತ್ತಿದ್ದರು. ಬಸ್ ಅಡ್ಯಾರ್ ಸಮೀಪಿಸುತ್ತಿದ್ದಂತೆ ಚಾಲಕನ ಕಣ್ಣು ಮಂಜಾಗಿದೆ. ಬಸ್ ಬಾಗಿಲಲ್ಲಿ ಜನ ನೇತಾಡುವಷ್ಟು ಪ್ರಯಾಣಿಕರು ತುಂಬಿದ್ದರು. ಹೀಗಾಗಿ ಬಸ್ ತನ್ನ ನಿಯಂತ್ರಣಕ್ಕೆ ಸಿಗುತ್ತಿಲ್ಲ ಅನ್ನುವುದು ಅರಿವಾಗುತ್ತಿದ್ದಂತೆ ಬಸ್ ಅನ್ನು ನಿಲ್ಲಿಸಿದ್ದಾರೆ.
ಬಸ್ ನಿಲ್ಲುತ್ತಿದ್ದಂತೆ ಸ್ಟೇರಿಗ್ ಮೇಲೆ ಸಂತೋಷ್ ಕುಸಿದು ಬಿದ್ದಿದ್ದಾರೆ. ಈ ವೇಳೆ ಬಸ್ ನಲ್ಲಿದ್ದವರು ಗಾಬರಿಯಾಗಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಕೆಲ ಪ್ರಯಾಣಿಕರು ಸಂತೋಷ್ ಅವರನ್ನು ಪಡೀಲಿನ ನ್ಯೂರೋ ಫಸ್ಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಒಂದು ವೇಳೆ ಸಂತೋಷ್ ಮುನ್ನೆಚ್ಚರಿಕೆ ವಹಿಸಿದೇ ಇರುತ್ತಿದ್ರೆ ಇವತ್ತು ದೊಡ್ಡದೊಂದು ದುರಂತಕ್ಕೆ ಮಂಗಳೂರು ಸಾಕ್ಷಿಯಾಗಬೇಕಾಗಿತ್ತು. ಇದೀಗ ಚಾಲಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಗೊತ್ತಾಗಿದೆ.
Discussion about this post