ಮಂಗಳೂರು : ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಗಳೂರನ್ನು ಮೀರಿ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಅವೆಲ್ಲವೂ ಆದೇಶದಲ್ಲಿ ಇದೆ ಹೊರತು ಜಾರಿಯಾಗಿಲ್ಲ. ಕನಿಷ್ಟ ಪಕ್ಷ ಸೋಂಕು ಹೆಚ್ಚಿರುವ ಗ್ರಾಮಗಳಲ್ಲಿ ಕಠಿಣ ಕ್ರಮದ ಅಧಿಕಾರವನ್ನು ಪಿಡಿಓಗಳಿಗೆ ನೀಡುವ ಮೂಲಕ ಜನತೆಯಲ್ಲಿ ಜಾಗೃತಿ ಮತ್ತು ಭಯವನ್ನು ಮೂಡಿಸಲು ಸಾಧ್ಯವಿದೆ.
ಈ ನಡುವೆ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಸೆಂ ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಸಭೆ ನಡೆಸಿದರು.
ಈ ವೇಳೆ ಶಾಸಕ ಯುಟಿ ಖಾದರ್, ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್, ಮಾಸ್ಕ್, ಮತ್ತು ಗ್ಲೌಸ್ ಕೊರತೆ ದೆ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯಧಿಕಾರಿ ಡಾ.ಕಿಶೋರ್ ಕುಮಾರ್, ಪಿಪಿಇ ಕಿಟ್ ಲಭ್ಯವಿದೆ. ಗ್ಲೌಸ್ ಮತ್ತು ಎಲ್ 95 ಮಾಸ್ಕ್ ಕೊರತೆ ಇದ್ದು ಪೂರೈಕೆ ಕ್ರಮ ಕೈಗೊಳ್ಳಲಾಗಿದೆ ಅಂದರು.
ಇದರಿಂದ ಕೆಂಡಾಮಂಡಲರಾದ ಸಿಎಂ ನೇರವಾಗಿ ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ವಿರುದ್ಧ ತಿರುಗಿ ಬಿದ್ದರು. ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಿಎಂ, ಮಾಸ್ಕ್, ಗ್ಲೌಸ್ ಇಲ್ಲದೇ ಏನು ಆಡಳಿತ ಮಾಡ್ತೀರಾ ಇಲ್ಲಿ… ಆರೋಗ್ಯ ಸಿಬ್ಬಂದಿಗೆ ಬೇಕಾದ ಸವಲತ್ತು ಕೊಡೋಕೆ ನಿಮ್ಮಿಂದ ಆಗಲ್ವಾ…ಅಷ್ಟು ಕಾಮನ್ ಸೆನ್ಸ್ ಇಲ್ಲದೇ ಏನ್ರೀ ಮಾಡ್ತೀರಾ ನೀವು ಇಲ್ಲಿ ಎಂದು ಪ್ರಶ್ನಿಸಿದರು.
ಎಸ್.ಡಿ.ಆರ್.ಎಫ್ ಫಂಡ್ ನಿಂದ ಇಂದು ಎಲ್ಲವನ್ನೂ ಇಲ್ಲೇ ಖರೀದಿ ಮಾಡಿ, ಬೆಂಗಳೂರಿನಿಂದ ಖರೀದಿ ಮಾಡಬೇಕಾಗಿಲ್ಲ. ಇಂದು ಸಂಜೆಯೊಳಗೆ ಖರೀದಿಯ ಎಲ್ಲಾ ವಿವರಗಳನ್ನು ಸಲ್ಲಿಸಬೇಕು ಎಂದು ಸೂಚಿಸಿದರು.
ಇದೇ ವೇಳೆ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಗೂ ಕ್ಲಾಸ್ ತೆಗೆದುಕೊಂಡ ಬೊಮ್ಮಾಯಿ “ ಏನಯ್ಯ, ನೀನ್ ಏನ್ ಮಾಡ್ತಾ ಇದೀಯ ಇಲ್ಲಿ ಅಂತ ಹೇಳು. ನಿನ್ನತ್ರ ಏನು ಸಮಸ್ಯೆ ಇದೆ ಅಂತ ಡಿಸಿ ಗಮನಕ್ಕೆ ತರೋಕೆ ಗೊತ್ತಿಲ್ವಾ? ಮೋಸ್ಟ್ ಸೀನಿಯರ್ ಹೆಲ್ತ್ ಆಫೀಸರ್ ಆಗಿದ್ರೂ ನೀನ್ ಏನ್ ನಿದ್ದೆ ಮಾಡ್ತಾ ಇದೀಯಾ..? ಮಾಸ್ಕ್, ಗ್ಲೌಸ್ ಎಷ್ಟು ಕೊರತೆ ಇದೆ ಅನ್ನೋದು ಲೆಕ್ಕ ಇಡೋಕೆ ಆಗಲ್ವಾ ನಿಂಗೆ ಎಂದು ಕಟು ಶಬ್ಧಗಳಲ್ಲಿ ಅಧಿಕಾರಿಯ ಚಳಿ ಬಿಡಿಸಿದರು.
Discussion about this post