ಬೆಂಗಳೂರು : ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಅಂಬರೀಶ್ ಸಾರಿರುವ ಸಮರ ಕೇವಲ ಜೆಡಿಎಸ್ ನಾಯಕರ ನಿದ್ದೆ ಕದ್ದಿದೆ ಅನ್ನಲಾಗಿತ್ತು. ಕನ್ನಂಬಾಡಿ ಕಟ್ಟೆಯ ಸುರಕ್ಷತೆ ಸಲುವಾಗಿ ಸುಮಲತಾ ಅಕ್ರಮ ಗಣಿಗಾರಿಕೆ ವಿರುದ್ಧ ದನಿ ಎತ್ತಿದ್ದರು. ಕುಂಭಕರ್ಣ ನಿದ್ದೆಯಲ್ಲಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಸಲುವಾಗಿ ಫೀಲ್ಡಿಗಿಳಿದಿರುವ ಸುಮಲತಾ ನಡೆ ಮಾಜಿ ಸಿಎಂ ಕುಮಾರಸ್ವಾಮಿಯವರನ್ನೇ ಕಂಗಾಲು ಮಾಡಿದೆ.
ಸುಮಲತಾ ವಿರುದ್ಧ ಸಭ್ಯವಲ್ಲದ ಹೇಳಿಕೆ ಕೊಟ್ಟಿದ್ದ ಕುಮಾರಸ್ವಾಮಿ, ಇದೀಗ ದೊಡ್ಡವರ ಸುದ್ದಿ ನಮಗ್ಯಾಕೆ ಅನ್ನುವ ಪರಿಸ್ಥಿತಿಗೆ ತಲುಪಿದ್ದಾರೆ. ಸುಮಲತಾ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದರೆ ಕುಮಾರಸ್ವಾಮಿ ಕೈ ಮುಗಿದು ಮುಂದೆ ಸಾಗುತ್ತಿದ್ದಾರೆ ಅಂದ್ರೆ ಮಂಡ್ಯ ಸಂಸದರ ಹೋರಾಟ ಅದ್ಯಾವ ಮಟ್ಟಿಗೆ ಚುರುಕುಮುಟ್ಟಿಸಿರಬೇಕು.
ಆದರೆ ಸುಮಲತಾ ಹೋರಾಟ ಕೇವಲ ದಳಪತಿಗಳು ಮಾತ್ರವಲ್ಲ, ಕಮ್ಯುನಿಸ್ಟ್ ನಾಯಕರ ಬುಡಕ್ಕೂ ಬಿಸಿ ಮುಟ್ಟಿಸಿದೆ. ಸುಮಲತಾ ಅವರ ಅಕ್ರಮ ಗಣಿಗಾರಿಕೆ ಸಮರ ಕುರಿತಂತೆ ಮಾತನಾಡಿರುವ ಸಿಪಿಎಂ ರಾಜ್ಯ ಮುಖಂಡ ಜಿಎನ್ ನಾಗರಾಜು, ಸಂಸದೆ ಸುಮಲತಾ ತಮ್ಮ ಲೋಪದೋಷಗಳನ್ನು ಮುಚ್ಚಿಡುವ ಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಸುಮಲತಾ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಕೆಲಸ ಮಾಡುತ್ತಿರುವಂತೆ ಬೇರಾವ ಸಮಸ್ಯೆ ವಿರುದ್ಧ ದನಿ ಎತ್ತಿಲ್ಲ. ರೈತ ವಿರೋಧಿ ಕಾನೂನು ಬಗ್ಗೆ ಮಾತೇ ಆಡಿಲ್ಲ, ಕೊರೋನಾ ಸಮಯದಲ್ಲಿ ಜಿಲ್ಲೆಯ ಜನತೆಗೆ ಸಹಾಯ ಮಾಡಿಲ್ಲ, ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡು ಊರಿಗೆ ಬಂದಿರುವ ಯುವಕರಿಗೆ ಕೆಲಸ ಮಾಡಬೇಕಿತ್ತು ಅಂದಿದ್ದಾರೆ.
ಜೊತೆಗೆ ಅಕ್ರಮವೋ, ಸಕ್ರಮವೋ ಎಲ್ಲಾ ರೀತಿಯ ಗಣಿಗಾರಿಕೆ ನಿಲ್ಲಿಸಬೇಕು, ಇದು ಸರ್ಕಾರಿ ಜವಬ್ದಾರಿ ಅಂದಿರುವ ನಾಗರಾಜು, ಸುಮಲತಾ ಅವರಿಗ್ಯಾಕೆ ಬೇಕಿತ್ತು ಉಸಾಬರಿ ಬೇಕಿತ್ತು ಅನ್ನುವ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದಾರೆ.
ಇನ್ನು ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿರುವ ನಾಗರಾಜು, ಕುಮಾರಸ್ವಾಮಿಯವರದ್ದು ಪಾಳೇಗಾರಿಕೆ ಸಂಸ್ಕೃತಿ, ಸುಮಲತಾ ವಿರುದ್ಧ ಪಾಳೇಗಾರಿಕೆ ಮಾತುಗಳನ್ನಾಡಿ ಜನರಿಂದ ಉಗಿಸಿಕೊಂಡಿದ್ದಾರೆ ಆದರೆ ಮತ್ತೆ ಆದೇ ಅಸಹ್ಯದ ಮಾತು ಮುಂದುವರಿಸಿದ್ದಾರೆ, ಇದನ್ನು ನಿಲ್ಲಿಸದಿದ್ರೆ ಜನರೇ ಬುದ್ದಿ ಕಲಿಸುತ್ತಾರೆ ಎಂದು ಜಿಎನ್ ನಾಗರಾಜು ಎಚ್ಚರಿಕೆ ಕೊಟ್ಟಿದ್ದಾರೆ.
Discussion about this post