ಶಾಸಕ ಮುನಿರತ್ನ ವಿರುದ್ಧದ ತನಿಖೆಗೆ SIT ಸಿದ್ದರಾಮಯ್ಯ ಸಮರ್ಥನೆ
ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಲ್ಲಿ ಮುಂಗಾರು ಬೆಳೆ ಬೆಳೆದಿರುವ ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂಗಾರು ಬೆಳೆಗೂ ನೀರು ನೀಡುವುದಾಗಿ ಘೋಷಿಸಿದ್ದಾರೆ.
ಕೊಪ್ಪಳ ತಾಲೂಕಿನ ಗಿಣಗೇರಾ ಏರಸ್ಟ್ರಿಪ್ ನಲ್ಲಿ ಮಾತನಾಡಿದ ಅವರು ತುಂಗಭದ್ರಾ ಜಲಾಶಯ ಮತ್ತೆ ತುಂಬಿದ್ದು ಈ ಭಾಗದ ರೈತರಿಗೆ ಎರಡನೇ ಬೆಳೆಗೆ ನೀರು ಕೊಡುವುದಾಗಿ ಸ್ಪಷ್ಟಪಡಿಸಿದರು.
ಕ್ರಸ್ಟ್ ಗೇಟ್ ಗಳನ್ನು 50 ವರ್ಷಕ್ಕೆ ಒಮ್ಮೆ ಬದಲಿಸಬೇಕು. 70 ವರ್ಷಗಳಿಂದ ಗೇಟ್ ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಉತ್ತಮ ನಿರ್ವಹಣೆ ಮಾಡಿರುವುದರಿಂದ 70 ವರ್ಷ ಕೆಲಸ ಮಾಡಿದೆ. ಪ್ರಸ್ತುತ ತಜ್ಞರ ಸಮಿತಿ ರಚನೆಯಾಗಿದ್ದು, ಅವರು ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು.
ತುಂಗಭದ್ರ ಜಲಾಶಯ ಮತ್ತೆ ತುಂಬಿದೆ. 101.77 ಟಿ.ಎಂ.ಸಿ ನೀರು ಲಭ್ಯವಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ನೀರು ಸಿಗಲಿದೆ. ಕೊಚ್ಚಿಹೋಗಿದ್ದ 19 ನೇ ಕ್ರಸ್ಟ್ ಗೇಟ್ ನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶಿವರಾಜ ತಂಗಡಗಿ, ಜಮೀರ್ ಅಹಮದ್ ಖಾನ್ ಅವರು ಸ್ಥಳದಲ್ಲಿಯೇ ಇದ್ದು ದುರಸ್ತಿಗೆ ಕ್ರಮ ವಹಿಸಿದರು. ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ, ಜಿಂದಾಲ್, ನಾರಾಯಣ್ ಇಂಜಿನಿಯರಿಂಗ್ ಹಾಗೂ ಇಂಜಿನಿಯರ್ಗಳು, ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ಆದಷ್ಟು ತ್ವರಿತವಾಗಿ ಗೇಟ್ ಅಳವಡಿಸಲು ಸಾಧ್ಯವಾಯಿತು. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. 20ಕ್ಕೂ ಹೆಚ್ಚು ಟಿ.ಎಂ.ಸಿ ನೀರು ಉಳಿಯಿತು.
ಬೆಳೆಗೆ ನೀರು ಸಿಗುತ್ತದೋ ಇಲ್ಲವೋ ಎಂಬ ರೈತರ ಆತಂಕ ನಿವಾರಣೆಯಾಗಿದೆ. ಹಿಂಗಾರಿನ ಬೆಳೆಗೆ ಯಾವುದೇ ತೊಂದರೆ ಇಲ್ಲ. ಎರಡನೇ ಬೆಳೆಗೆ ನೀರು ಒದಗಿಸಲು ಪ್ರಯತ್ನಿಸಲಾಗುವುದು.101 ಟಿಎಂಸಿ ಲಭ್ಯವಿರುವುದರಿಂದ ನೀರು ಲಭ್ಯವಾಗಬಹುದು.
ನಮ್ಮ ಸರ್ಕಾರವಿದ್ದಾಗ ರಸ್ತೆಗಳ ನಿರ್ಮಾಣ ಮಾಡಿದ್ದೆವು. ಬಿಜೆಪಿ ಕಾಲದಲ್ಲಿ ರಸ್ತೆಗಳಾಗಿಲ್ಲ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ರಸ್ತೆಗಳು ಹಾಳಾಗಿವೆ, ಅದರ ದುರಸ್ತಿ ಮಾಡಿಸಲಾಗುವುದು.
ಅರ್ಕಾವತಿ ಬಡಾವಣೆ ಬಗ್ಗೆ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದರೆ ಸರ್ಕಾರ ಈ ಬಗ್ಗೆ ಗಮನಹರಿಸಲಿದೆ. ಮಾಹಿತಿ ಸೋರಿಕೆಯಾಗಿದೆ ಎಂಬ ಬಗ್ಗೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ, ರಾಜ್ಯಪಾಲರ ಕಛೇರಿಯಿಂದಲೇ ಈ ಮಾಹಿತಿ ಸೋರಿಕೆಯಾಗಿರಬಹುದು. ಈ ಬಗ್ಗೆ ತನಿಖೆಯಾಗಲಿ. ನಾನೂ ಪತ್ರಿಕೆಯಲ್ಲಿ ಓದಿ ತಿಳಿದಿದ್ದೇನೆ.
ಮಾಗಡಿಯಲ್ಲಿ ಬಹಳ ಮಂದಿ ಶಾಸಕರು, ರೈತರು ಹಸು ಸಾಕಣೆಯ ವೆಚ್ಚ ಹೆಚ್ಚಾಗಿದ್ದು ಹಾಲಿನ ದರ ಹೆಚ್ಚಳ ಮಾಡಲು ಒತ್ತಾಯ ಮಾಡಿದರು. ಒಂದು ವೇಳೆ ಹಾಲಿನ ದರ ಹೆಚ್ಚು ಮಾಡಿದರೆ ಅದನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಬೇಕೆಂದು ಸೂಚಿಸಲಾಗಿದೆ.
ನಾವು ಯಾರ ಮೇಲೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಪರಾಧ ಮಾಡಿ ಎಂದು ನಾವು ಯಾರಿಗೂ ಹೇಳಿಲ್ಲ. ಮುನಿರತ್ನ ಅವರ ಮೇಲೆ ಮೂರು ಪ್ರಕರಣಗಳು ದಾಖಲಾಗಿದೆ. ನಮ್ಮ ಶಾಸಕರು ನನ್ನನ್ನು ಭೇಟಿ ಮಾಡಿ ಎಸ್.ಐ.ಟಿ ರಚಿಸಲು ಕೋರಿದರು. ಅವರ ಕೋರಿಕೆಗೆ ಸ್ಪಂದಿಸಿ ಎಸ್.ಐ.ಟಿ ರಚಿಸಿದ್ದೇವೆ. ತಪ್ಪು ಮಾಡಿದ್ದರೆ ತಾನೇ ಎಫ್ ಐ ಆರ್ ಆಗುವುದು. ನಾವು ಯಾರಿಗೂ ಕಿರುಕುಳ ನೀಡಿ ಕೇಸು ದಾಖಲಿಸಿಲ್ಲ, ಸ್ವ ಇಚ್ಛೆಯಿಂದ ಕೇಸು ದಾಖಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಎರಡನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಕೊಚ್ಚಿ ಹೋಗಿದ್ದ ಕ್ರೆಸ್ಟ್ ಗೇಟನ್ನು ಅತ್ಯಂತ ತುರ್ತಾಗಿ ಅಳವಡಿಸಿದ ಎಂಜಿನಿಯರ್ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದರು.
ಗೇಟ್ ಮುರಿದಾಗ ನಮ್ಮ ರೈತರು ಆತಂಕದಲ್ಲಿದ್ದರು. ಜಲ ಸಂಪನ್ಮೂಲ ಸಚಿವರು ಮತ್ತು ನಾನು ಚರ್ಚಿಸಿ ತುರ್ತಿನ ಕ್ರಮಕ್ಕೆ ಮುಂದಾದೆವು. ನಮ್ಮ ಸೂಚನೆಯಂತೆ ಒಂದೇ ವಾರದಲ್ಲಿ ಗೇಟ್ ಅಳವಡಿಸಿ 20 ಟಿಎಂಸಿ ನೀರನ್ನು ಉಳಿಸಿದ ತಜ್ಞ ಕನ್ನಯ್ಯ ನಾಯ್ಡು ಮತ್ತು ಎಂಜಿನಿಯರ್ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ.
ಎಡ ಮತ್ತು ಬಲ ದಂಡೆ ಕಾಲುವೆ ಸೇರಿ ರಾಜ್ಯದ 9,26,438 ಎಕರೆ ಕೃಷಿಭೂಮಿಗೆ, ಆಂದ್ರಪ್ರದೇಶದ 6,25,097 ಎಕರೆ, ತೆಲಂಗಾಣದ 87,000 ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ತುಂಗಭದ್ರಾ ಅಣೆಕಟ್ಟು ಎರಡನೇ ಬಾರಿ ತುಂಬಿರುವುದ ಅತ್ಯಂತ ಸಂತಸದ ವಿಚಾರ.
ವಿರೋಧ ಪಕ್ಷದ ಮಾತುಗಳಿಗೆ ಕಿವಿಕೊಡಬೇಡಿ. ಮೊದಲು ದಿನಕ್ಕೊಂದು ಸುಳ್ಳು ಹೇಳುತ್ತಿದ್ದ ಬಿಜೆಪಿ ಈಗ ಗಳಿಗೆಗೊಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ. ಬಿಜೆಪಿ ನಿಮ್ಮನ್ನು ಯಾಮಾರಿಸಿ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎನ್ನುವ ನಂಬಿಕೆ ನನಗಿದೆ. ಏಕೆಂದರೆ ಕೊಪ್ಪಳ, ಬಳ್ಳಾರಿ, ವಿಜಯನಗರದ ಜನತೆ ಏನು ಅಂತ ನನ್ನ ಹೃದಯಕ್ಕೆ ಚನ್ನಾಗಿ ಗೊತ್ತು. ಬಿಜೆಪಿ ಮಾತನ್ನು ನಂಬಬೇಡಿ. ಎರಡೂ ಬೆಳೆಗೂ ನೀರು ಕೊಡುತ್ತೇವೆ.
ಅಣೆಕಟ್ಟೆಯ 19ನೇ ಕ್ರೆಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ನೀರು ಹರಿದು ಹೋಗಿದ್ದನ್ನು ಪರಿಶೀಲಿಸಲು ಆಗಸ್ಟ್ 13 ರಂದು ಇಲ್ಲಿಗೆ ಆಗಮಿಸಿದ್ದೆ. ತುಂಗಭದ್ರಾ ಅಣೆಕಟ್ಟು ಮತ್ತೆ ಮೈ ತುಂಬಿಕೊಳ್ಳುತ್ತದೆ. ಆಗ ನಾನೇ ಬಂದು ಬಾಗಿನ ಅರ್ಪಿಸುತ್ತೇನೆ ಎಂದು ಆಗ ಹೇಳಿದ್ದೆ. ಕೊಟ್ಟ ಮಾತಿನಂತೆ ಇಂದು ಬಾಗಿನ ಅರ್ಪಿಸಿದ್ದೇನೆ.
ಕಲ್ಯಾಣ ಕರ್ನಾಟಕದ ಎಲ್ಲಾ ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆ ಕೊಟ್ಟಿದ್ದೀರಿ. ನಾವು ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಕ್ಯಾಬಿನೆಟ್ ನಡೆಸಿ 46 ವಿಷಯಗಳನ್ನು, ಅನೇಕ ಕಾರ್ಯಕ್ರಮಗಳನ್ನು ಕಲ್ಯಾಣ ಕರ್ನಾಟಕದ ಅಭಿವಧ್ಧಿಗಾಗಿ ಘೋಷಿಸಿದ್ದೇವೆ.
ಕಲ್ಯಾಣ ಕರ್ನಾಟಕಕ್ಕೆ 371ಜೆ ಜಾರಿ ಮಾಡಲು ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ವಿರೋಧಿಸಿತ್ತು. ಆದರೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ 371 ಜೆ ಜಾರಿ ಮಾಡಿದರು.
ಪ್ರಾದೇಶಿಕ ಅಸಮಾನತೆ ಅಧ್ಯಯನಕ್ಕೆ ಗೋವಿಂದರಾವ್ ಅವರ ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ನೀಡುತ್ತಿದ್ದಂತೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಹೊಸ ನೀಲನಕ್ಷೆ ರಚಿಸುತ್ತೇವೆ. ಈಗಾಗಲೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ₹5,000 ಕೋಟಿ ಘೋಷಿಸಿ ಆಗಿದೆ. ಕೇಂದ್ರ ಸರ್ಕಾರ ಕೂಡ ₹5,000 ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದೇವೆ. ಕೇಂದ್ರ ಕೊಡುತ್ತದೋ ಇಲ್ಲವೋ ನೀವೇ ನೋಡಿ ಎಂದು ಸಿದ್ದರಾಮಯ್ಯ ಹೇಳಿದರು.