ಹೊಸ ವಾಹನಗಳ ಮಾರಾಟ ಪ್ರಮಾಣವು ಕಳೆದ ಹಲವು ತಿಂಗಳಿನಿಂದ ಕುಸಿತ ಕಂಡಿದೆ. ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಕರಿ ನೆರಳ ಛಾಯೆ ಬಿದ್ದಿರುವುದೇ ಇದಕ್ಕೆ ಕಾರಣ. ಹೀಗಾಗಿ ಅಟೋಮೊಬೈಲ್ ಕ್ಷೇತ್ರ ಆತಂಕದಲ್ಲಿದೆ.
ಕನಿಷ್ಠ ಪ್ರಮಾಣದ ವಾಹನಗಳನ್ನು ಮಾರಾಟ ಮಾಡಲು ಸಂಸ್ಥೆಗಳು ಪರದಾಡುತ್ತಿದ್ದು, ಹೀಗಾಗಿ ಹೊಸ ವಾಹನಗಳ ಉತ್ಪಾದನೆಯನ್ನು ನಿಲ್ಲಿಸಲು ಹಲವು ಸಂಸ್ಥೆಗಳು ನಿರ್ಧರಿಸಿದೆ.
ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಕ್ಲಿಯೆರೆನ್ಸ್ಗಾಗಿ ಹರಸಾಹಸ ಪಡುತ್ತಿದ್ದು, ತಾತ್ಕಾಲಿಕವಾಗಿ ಹೊಸ ವಾಹನಗಳ ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತಿವೆ.
ಹೀಗಾಗಿ ಆಟೋ ಉದ್ಯಮವನ್ನೇ ನೆಚ್ಚಿಕೊಂಡಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮಾರುತಿ ಸುಜುಕಿ ಸಂಸ್ಥೆ ತನ್ನ ಮನೆಸಾರ್, ಗುರುಗ್ರಾಮ್ ಮತ್ತು ಗುಜರಾತ್ನಲ್ಲಿರುವ ಮೂರು ಘಟಕಗಳಲ್ಲೂ ತಲಾ ಒಂದೊಂದು ಶಿಫ್ಟ್ನಲ್ಲಿ ಮಾತ್ರವೇ ಕಾರು ಉತ್ಪಾದನೆಯನ್ನು ಮಾಡುತ್ತಿದೆ. ಈ ಹಿಂದೆ ಮೂರು ಶಿಫ್ಟ್ಗಳಲ್ಲಿ ನಡೆಯುತ್ತಿದ್ದ ಹೊಸ ಕಾರು ಉತ್ಪಾದನೆಯನ್ನು ಕೇವಲ ಒಂದು ಶಿಫ್ಟ್ಗೆ ತಗ್ಗಿಸಲಾಗಿದೆ.
ಹೀಗಾಗಿ ಸಾವಿರಾರು ಗುತ್ತಿಗೆ ಆಧಾರದ ಮೇಲಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಈ ನಡುವೆ ಮಹೀಂದ್ರಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದು, ಮಹೀಂದ್ರಾ ಸಂಸ್ಥೆಯು ಅಗಸ್ಟ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 14 ದಿನಗಳ ಕಾಲ ಕಾರು ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆಯಂತೆ.
ಒಂದೆಡೆ ಕೇಂದ್ರ ಸರ್ಕಾರ ಎಲೆಕ್ಟಿಕ್ ವಾಹನ ಉತ್ಪಾದನೆಗೆ ಒತ್ತಡ ಹೇರುತ್ತಿರುವುದು ಮತ್ತು ಮತ್ತೊಂದು ಕಡೆ ಬದಲಾಗುತ್ತಿರುವ ಆಟೋಮೊಬೈಲ್ ನೀತಿಗಳೇ ಈ ಸಂಕಷ್ಟಕ್ಕೆ ಕಾರಣ ಎನ್ನಲಾಗಿದೆ.
Discussion about this post