ವಾರಾಣಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕ ವಾದ್ರಾ ಸ್ಪರ್ಧೆ ಮಾಡುತ್ತಾರೆ ಅನ್ನುವ ಸುದ್ದಿಗೆ ತೆರೆ ಬಿದ್ದಿದೆ. ಕಳೆದ ಸಲ ಮೋದಿ ವಿರುದ್ಧ ಭರ್ಜರಿ ಸೋಲು ಕಂಡ ಅಜಯ್ ರಾಯ್ ಅವರನ್ನೇ ಈ ಬಾರಿಯೂ ಕಾಂಗ್ರೆಸ್ ಕಣಕ್ಕಿಳಿಸುತ್ತಿದೆ.
ಹಾಗಾದ್ರೆ ಅಜಯ್ ರಾಯ್ ಯಾರು. ? ಇವರು ಕೂಡಾ ಬಿಜೆಪಿಯವರೇ..ಒಂದು ಕಾಲದಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದವರೇ ಮೋದಿ ವಿರುದ್ಧ ಇದೀಗ ಸ್ಪರ್ಧೆ ಮಾಡುತ್ತಿದ್ದಾರೆ.
ಮೋದಿ ವಿರುದ್ಧ ಸ್ಪರ್ಧಿಸುತ್ತಿರುವ ಅಜಯ್ ಸಿಂಗ್ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂಲದವರು. ವಿದ್ಯಾರ್ಥಿ ಸಂಘಟನೆ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದ ಅಜಯ್ ಅವರಿಗೆ 1996ರಿಂದ 2007ರವರೆಗೆ ಉತ್ತರ ಪ್ರದೇಶದ ಕೋಸ್ಲಾ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿ ಟಿಕೆಟ್ ಕೊಟ್ಟಿತ್ತು. ಮೂರು ಬಾರಿಯೂ ಅವರು ಶಾಸಕರಾಗಿದ್ದರು.
ಆದರೆ 2007ರ ವಿಧಾನಸಭೆ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ಕೊಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿತು. ಇದರಿಂದ ಬೇಸರಗೊಂಡ ಅವರು ಸಮಾಜವಾದಿ ಪಕ್ಷಕ್ಕೆ ಜಿಗಿದಿದ್ದರು. 2009ರಲ್ಲಿ ಬಿಜೆಪಿಯ ಮುರಳಿ ಮನೋಹರ್ ಜೋಷಿ ಅವರ ವಿರುದ್ಧ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ, ಇವರು ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಬ್ರಾಹ್ಮಣರು ಮತ್ತು ಭೂಮಿಹಾರ್ ಸಮುದಾಯದ ಅಪಾರ ಬೆಂಬಲ ಹೊಂದಿರುವ ಅಜಯ್ ರಾಯ್ ಅವರಿಗೆ ಸಮುದಾಯದ ಬೆಂಬಲ ಆಗ ಸಿಗಲಿಲ್ಲ.
ಮತ್ತೆ 2009ರಲ್ಲಿ ಕೋಸ್ಲಾ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಜಯ್ ರಾಯ್ ಶಾಸಕರಾಗಿ ಆಯ್ಕೆಯಾಗಿದ್ದರು. ಕೋಸ್ಲಾ ವಿಧಾನಸಭಾ ಕ್ಷೇತ್ರ ಮರವಿಂಗಡಣೆಗೊಂಡು ಪಿಂಡ್ರಾ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ 2012ರಲ್ಲಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು.
ನಂತ್ರ 2017ರಲ್ಲಿ ಬಿಜೆಪಿಯ ಅವದೇಶ್ ಸಿಂಗ್ ಇದೇ ಕ್ಷೇತ್ರದಲ್ಲಿ ಅಜಯ್ ರಾಯ್ ಅವರಿಗೆ ಸೋಲಿನ ರುಚಿ ಕಾಣಿಸಿದರು.
2009ರಲ್ಲಿ ಜೋಷಿ ವಿರುದ್ಧ ಲೋಕಸಭಾ ಸಮರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಅಜಯ್ ರಾಯ್ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಅಜಯ್ ರಾಯ್ ಸ್ಪರ್ಧಿಸಿದ್ದರು.
ಆಗ ಅಂದಾಜು 75 ಸಾವಿರ ಮತಗಳನ್ನು ಗಳಿಸಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ ಮತ್ತೊಮ್ಮೆ ಮೋದಿಯನ್ನು ಸೋಲಿಸಿಯೇ ಸಿದ್ದ ಎಂದು 2019ರ ಲೋಕಸಭಾ ಚುನಾವಣೆಗೆ ಅಜಯ್ ರಾಯ್ ಸಿದ್ದವಾಗುತ್ತಿದ್ದಾರೆ.
Discussion about this post