೩೦ ಲಕ್ಷದಷ್ಟು ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ
ಜಗತ್ತಿನಾದ್ಯಂತ ಇಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತಿದೆ. ಜಾಗತಿಕವಾಗಿ ಹೃದಯದ ಆರೋಗ್ಯದ ಬಗ್ಗೆ ಮತ್ತು ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ ೨೯ ಅನ್ನು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ದಿನ ಜಗತ್ತಿನಾದ್ಯಂತ ಅತಿ ಹೆಚ್ಚಿನ ಪ್ರಮಾಣದ ಜನರ ಸಾವಿಗೆ ಕಾರಣವಾಗಿರುವ ಹೃದ್ರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಈ ವರ್ಷದ ಘೋಷವಾಕ್ಯ ಕ್ರಿಯೆಗಾಗಿ ಹೃದಯವನ್ನು ಬಳಸಿ ಎಂಬುದಾಗಿದೆ.ದೇಶದಲ್ಲಿ ವರ್ಷಕ್ಕೆ ಸುಮಾರು ೩೦ ಲಕ್ಷದಷ್ಟು ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ ಇದಕ್ಕೆ ಪ್ರಮುಖ ಕಾರಣ ಜೀವನ ಶೈಲಿಯಲ್ಲಾದ ಬದಲಾವಣೆ ಎಂದು ಹೃದ್ರೋಗತಜ್ಞ ಹಾಗು ಸಂಸದ ಡಾ: ಸಿ.ಎನ್ ಮಂಜುನಾಥ್ ಹೇಳಿದ್ದಾರೆ.
ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆ ಆವರಣದಲ್ಲಿ ನಡೆದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದಲ್ಲಿ ೧೯೬೦ ರಲ್ಲಿ ಶೇಕಡ ೪ ರಷ್ಟು ಇದ್ದ ಹೃದಯ ಸಂಬಂಧಿ ಕಾಯಿಲೆಗಳು ಶೇಕಡ ಈಗ ೧೦ರಷ್ಟು ಏರಿಕೆಯಾಗಿದೆ. ಇತ್ತೀಚೆಗೆ ೫೦ ಕ್ಕಿಂತ ಕಡಿಮೆ ವಯಸಿನವರಲ್ಲಿ ಹೆಚ್ಚಾಗಿ ಈ ಸಮಸ್ಯೆಗಳು ಕಂಡು ಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್. ಡಿ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ನಗರದ ಹೃದ್ರೋಗ ತಜ್ಞ ಡಾ: ವಿಜಯ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.