ನೆರೆ ಪರಿಹಾರ ವಿಚಾರದಲ್ಲಿ ಮಾಜಿ ಸಚಿವ ಕುಮಾರಸ್ವಾಮಿ ಆಡಿರುವ ಮಾತುಗಳು ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಅವರು ಇಂದು ಹೇಳಿರುವ ಎಲ್ಲಾ ಮಾತುಗಳು ಸತ್ಯಕ್ಕೆ ಹತ್ತಿರವಾಗಿದ್ದು, ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ವರ್ತನೆಯಲ್ಲಿ ಆಗಿರುವ ಬದಲಾವಣೆ ಯಕ್ಷ ಪ್ರಶ್ನೆಯಾಗಿ ಬಿಟ್ಟಿದೆ.
ಇಂದು ಮಂಡ್ಯದಲ್ಲಿ ಮಾತನಾಡಿರುವ ಕುಮಾರಸ್ವಾಮಿ, ನಾನು ಖಜಾನೆ ಖಾಲಿ ಮಾಡಿಲ್ಲ. ಎಷ್ಟು ಕೋಟಿ ಇಟ್ಟು ಬಂದಿದ್ದೇನೆ ಅನ್ನುವುದನ್ನು ಯಡಿಯೂರಪ್ಪ ಅವರೇ ಹೇಳಲಿ ಎಂದು ಸವಾಲು ಹಾಕಿದ್ದಾರೆ.
ಕರ್ನಾಟಕದ ಖಜಾನೆಗೆ ಎಂದಿಗೂ ದರಿದ್ರ ಬರೋದಿಲ್ಲ ಎಂದು ಇದೇ ವೇಳೆ ಹೇಳಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಮಾಡುತ್ತಲೇ ಯಡಿಯೂರಪ್ಪ ಅವರನ್ನು ಟೀಕಿಸಿದ್ದಾರೆ.
ನನ್ನ ಅವಧಿಯಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವವಾದ ವೇಳೆ, ಪ್ರಧಾನಿಯವರೇ ಕರೆ ಮಾಡಿ ಕಾಳಜಿ ತೋರಿದ್ದರು. ರಾಜ್ಯದ ಪರಿಸ್ಥಿತಿ ಏನು ಅನ್ನುವ ಕುರಿತಂತೆ ವಿವರಣೆ ಬಯಸಿದ್ದರು. ಮಾತ್ರವಲ್ಲದೆ ಏನೇ ಸಹಾಯ ಬೇಕಿದ್ದರೂ ಕರೆ ಮಾಡಿ ಎಂದು ಹೇಳಿದ್ದರು.
ಪ್ರತೀ ಸಲ ದೆಹಲಿಗೆ ಹೋದ ವೇಳೆ ಕೇಳಿದಾಗಲೆಲ್ಲಾ ಸಮಯ ಕೊಟ್ಟಿದ್ದಾರೆ. ಆ ವೇಳೆ ಮುಕ್ತವಾಗಿ ಚರ್ಚೆ ನಡೆಸುತ್ತಿದ್ದ ಪ್ರಧಾನಿಗಳು ನನಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಒಟ್ಟು 7 ಸವ ಮೋದಿಯವರನ್ನು ಭೇಟಿಯಾಗಿದ್ದೇನೆ ಎಂದು ಮೋದಿಯವರನ್ನು ಕುಮಾರಸ್ವಾಮಿ ಹೊಗಳಿದ್ದಾರೆ.
ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಇವರ ನಡವಳಿಕೆ ಕುರಿತಂತೆ ಪ್ರಧಾನಿಗಳು ನಿತ್ಯ ವರದಿ ತರಿಸಿಕೊಳ್ಳುತ್ತಿದ್ದಾರೆ. ಈಗಲಾದ್ರು, ಮೋದಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ತಪ್ಪಾಗಿದೆ ಎಂದು ಅವರ ಕೈಕಾಲು ಹಿಡಿಯಿರಿ ಎಂದು ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಸಲಹೆ ಕೊಟ್ಟಿದ್ದಾರೆ.
ನನಗೆ ಕೊಟ್ಟಿರುವ ಸಹಕಾರವನ್ನು ಇವರಿಗೆ ಕೊಡುತ್ತಿಲ್ಲ ಅಂದ್ರೆ ಇವರಲ್ಲೆ ಸಮಸ್ಯೆ ಇದೆ ಅನ್ನುವ ಮೂಲಕ ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಭ ಮಾಡುತ್ತಿರುವುದ್ಯಾಕೆ ಅನ್ನುವುದಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.
Discussion about this post