ಬೆಂಗಳೂರು : ಈ ಮೊಬೈಲ್ ಅದರಲ್ಲೂ ಸ್ಮಾರ್ಟ್ ಪೋನ್ ಬಂದ ಮೇಲೆ ಕಿರಿಕಿರಿಗಳು ಹೆಚ್ಚಾಗಿದೆ. ನಾಗರಿಕತೆ ಅನ್ನುವುದನ್ನು ಮರೆತಿರುವ ಜನ ಲೌಡ್ ಸ್ಪೀಕರ್ ಹಾಕಿಕೊಂಡು ಮಾತನಾಡೋದು, ಹಾಡು, ನ್ಯೂಸ್ ಎಂದು ಉಳಿದವರಿಗೆ ಟಾರ್ಚರ್ ಕೊಡುತ್ತಿದ್ದಾರೆ.
ಅದರಲ್ಲೂ ಬಸ್ ಗಳಲ್ಲಿ ಚೈನಾ ಸೆಟ್ ಇಟ್ಟುಕೊಂಡವರ ಕಥೆ ಹೇಳುವುದೇ ಬೇಡ. ಮದುವೆ ಮನೆಯೇನೋ ಅನ್ನುವಂತೆ ಹಾಡುಗಳನ್ನು ಹಾಕಿಕೊಂಡಿರುತ್ತಾರೆ. ಇಯರ್ ಫೋನ್ ಬಳಸುವ ಸೌಜನ್ಯ ಇವರಿಗೆ ಇರೋದಿಲ್ಲ. ಈ ನಡುವೆ ಇಂತಹ ಕರ್ಕಶ ಪ್ರಿಯರಿಗೆ ಬುದ್ದಿ ಕಲಿಸುವ ನಿಟಿನಲ್ಲಿ ksrtc ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.
ಇನ್ನು ಮುಂದೆ KSRTC ಬಸ್ ಗಳಲ್ಲಿ ಜೋರಾಗಿ ಹಾಡು ಹಾಕಿದ್ರೆ, ನ್ಯೂಸ್ ಹಾಕಿದ್ರೆ ಕೇಸು ಬೀಳಲಿದೆ. ಕೇವಲ ಹಾಡು ಮಾತ್ರವಲ್ಲದೆ ಮೊಬೈಲ್ ನಲ್ಲಿ ಲೌಡ್ ಸ್ಪೀಕರ್ ಇಟ್ಟು ಏನೇ ಮಾಡಿದ್ರು ಇನ್ನು ಮುಂದೆ ಅದು ದಂಡನಾರ್ಹ ಅಪರಾಧ ಅನ್ನಿಸಿಕೊಳ್ಳಲಿದೆ.
ಈ ಸಂಬಂಧ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಸುತ್ತೋಲೆಯನ್ನು ಹೊರಡಿಸಿದ್ದು, ಹೈಕೋರ್ಟ್ ನಲ್ಲಿ ದಾಖಲಾಗಿರುವ ರಿಟ್ ಗಳನ್ನು ಉಲ್ಲೇಖಿಸಿ, ಕರ್ನಾಟಕ ಮೋಟಾರು ವಾಹನಗಳ ನಿಯಮ 1989 ನಿಯಮ 94 (1) (V) ರ ಅನ್ವಯ ನಿಯಮ ಉಲ್ಲಂಘಿಸಿದ ಪ್ರಯಾಣಿಕರ ವಿರುದ್ದ ಕ್ರಮ ಕೈಗೊಳ್ಳಲು ಚಾಲಕ ಮತ್ತು ನಿರ್ವಾಹಕರಿಗೆ ಅನುಮತಿ ನೀಡಲಾಗಿದೆ.
ಹೀಗೆ ಮೊಬೈಲ್ ನಲ್ಲಿ ಜೋರಾಗಿ ಶಬ್ಧ ಹೊರಸೂಸುವಂತೆ ಮಾಡುವ ಪ್ರಯಾಣಿಕರಿಗೆ ಮೊದಲು ಎಚ್ಚರಿಕೆ ನೀಡಲಾಗುತ್ತದೆ. ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದ್ರೆ ಅಂತಹ ಪ್ರಯಾಣಿಕನನ್ನು ಬಸ್ಸಿನಿಂದ ಇಳಿಸುವುದು ಅಥವಾ ಸದರಿ ಪ್ರಯಾಣಿಕ ಇಳಿಯುವವರೆಗೂ ಬಸ್ ನಿಲ್ಲಿಸಲು ಅನುಮತಿ ನೀಡಲಾಗಿದೆ.
BMTC ಬಸ್ ಗಳಲ್ಲಿ ಈ ನಿಯಮ 2019ರಿಂದಲೇ ಜಾರಿಯಲ್ಲಿದೆ.
Discussion about this post