ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರು 3 ದಿನಗಳಿಂದ ನಡೆಯುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಭಾನುವಾರ ಸಾರಿಗೆ ಸಚಿವರೊಂದಿಗೆ ನಡೆದ ಸಂಧಾನ ಸಭೆಯಲ್ಲಿ ಮುಷ್ಕರ ಕೈ ಬಿಡುವುದಾಗಿ ಹೇಳಿದ್ದ ನೌಕರರು ಸಭೆ ಮುಗಿಸಿ ಹೊರ ಬರುತ್ತಿದ್ದಂತೆ ಯು ಟರ್ನ್ ಹೊಡೆದಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ಸರ್ಕಾರ ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮೆ, ಕೊರೋನಾದಿಂದ ಮೃತಪಟ್ಟ ಕುಟುಂಬಕ್ಕೆ 30 ಲಕ್ಷ ಪರಿಹಾರ, ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ, ನೌಕರರ ತರಬೇತಿ ಅವಧಿ 2 ವರ್ಷದಿಂದ 1 ವರ್ಷಕ್ಕೆ, ನಿಗಮಗಳಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿ, ನಿಗಮಗಳಲ್ಲಿ ಬಾಟಾ ವ್ಯವಸ್ಥೆ ಜಾರಿ, ನೌಕರರ ಮೇಲಿನ ಮೇಲಾಧಿಕಾರಿಗಳ ಕಿರುಕುಳ ತಪ್ಪಿಸಲು ಸಮಿತಿ, ವೇತನ ಪರಿಷ್ಕರಣೆ ಸಂದರ್ಭದಲ್ಲಿ 6ನೇ ವೇತನ ಆಯೋಗದ ಶಿಫಾರಸುಗಳ ಪರಿಗಣನೆ ಸೇರಿ ಒಟ್ಟು 8 ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪಿಕೊಂಡಿತ್ತು.
ಆದರೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಅಂದಿದ್ದ ಸರ್ಕಾರ, 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಸರ್ಕಾರ ಹಿಂದೇಟು ಹಾಕಿತ್ತು, ಮಾತ್ರವಲ್ಲದೆ ನೌಕರರ ವೈದ್ಯಕೀಯ ಶುಲ್ಕ ಮರು ಪಾವತಿಗೂ ಸರ್ಕಾರ ಒಪ್ಪಿರಲಿಲ್ಲ.
ಸಂಧಾನ ಸಭೆಯಲ್ಲಿ ಸರ್ಕಾರ ಹಾಗೂ ನೌಕರರ ಒಕ್ಕೂಟದ ಸಂಧಾನ ಸಭೆಯಲ್ಲಿ ಈ ಮೇಲಿನ ವಿಚಾರಗಳ ಬಗ್ಗೆ ಸಮಗ್ರ ಚರ್ಚೆ ನಡೆದ ಬಳಿಕ ನೌಕರರ ಮುಖಂಡರು ಎಲ್ಲಾ ವಿಚಾರಗಳಿಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಯಾವಾಗ ಸಭೆ ಮುಗಿಸಿದ ಪದಾಧಿಕಾರಿಗಳು ಫ್ರೀಡಂ ಪಾರ್ಕ್ ಗೆ ತೆರಳಿದರೋ ಬಣ್ಣವೇ ಬದಲಾಗಿ ಹೋಯ್ತು.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಯು ಟರ್ನ್ ಹೊಡೆಯಲಾಯಿತು.
Discussion about this post