ಶುಭ ಪೂಂಜಾ ನಟನೆಯ ಕೊರಗಜ್ಜ koragajja ಸಿನಿಮಾ ಶೂಟಿಂಗ್ ಗೆ ಮತ್ತೆ ವಿಘ್ನ
ಶುಭ ಪೂಂಜಾ ನಟನೆಯ ಕೊರಗಜ್ಜನ koragajja ಕಥೆಯನ್ನು ಆಧರಿಸಿದ ಕರಿ ಹೈದ ಕರಿ ಅಜ್ಜ (Kari Haida Kari Ajja) ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ತ್ರಿವಿಕ್ರಮ್ ಬೆಳ್ತಂಗಡಿ (Trivikram Belthangadi) ನಿರ್ಮಾಪಕರಾಗಿರುವ ಈ ಸಿನಿಮಾದ ನಿರ್ದೇಶನದ ಹೊಣೆಯನ್ನು ಸುಧೀರ್ ಅತ್ತಾವರ ವಹಿಸಿಕೊಂಡಿದ್ದಾರೆ.
ಕಳೆದ ವರ್ಷದ ನವೆಂಬರ್ ಸೆಟ್ಟೇರಿದ್ದ ಸಿನಿಮಾ, ಇಷ್ಟು ಹೊತ್ತಿಗೆ ಬಿಡುಗಡೆಯ ಸನಿಹ ತಲುಪಬೇಕಿತ್ತು. ಆದರೆ ಚಿತ್ರತಂಡಕ್ಕೆ ಪದೇ ಪದೇ ಅನೇಕ ಅಡ್ಡಿಗಳು ಎದುರಾದ ಕಾರಣ ಚಿತ್ರೀಕರಣದಲ್ಲಿ ವಿಳಂಭವಾಗಿದೆ. ಈ ನಡುವೆ ಅಕ್ಟೋಬರ್ 28 ರಂದು ಚಿಕ್ಕಮಗಳೂರಿನ ಕಳಸದಲ್ಲಿ ಚಿತ್ರೀಕರಣದಲ್ಲಿ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ : ಅರ್ಜುನ್ ಸರ್ಜಾ ಪುತ್ರಿಯ ಲವ್ ಸ್ಟೋರಿ : Aishwarya Arjun weds Umapathy Ramaiah
ಕುದುರೆಮುಖ ಸಮೀಪದ ಕಳಸದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ಹಾಡಿನಲ್ಲಿ ಶುಭಾ ಪೂಂಜಾ ಕಾಣಿಸಿಕೊಳ್ಳುತ್ತಿದ್ದು, ಗಣೇಶ್ ಆಚಾರ್ಯ (Ganesh Acharya) ಕೊರಿಯೋಗ್ರಫಿ ಹೊಣೆ ಹೊತ್ತಿದ್ದರು. ಈ ವೇಳೆ ಏಕಾಏಕಿ ಚಿತ್ರೀಕರಣ ಸ್ಥಳಕ್ಕೆ ಸ್ಥಳೀಯ ಗುಂಪೊಂದು ನುಗ್ಗಿ ಚಿತ್ರೀಕರಣ ಮಾಡದಂತೆ ತಡೆಯುವ ಪ್ರಯತ್ನ ಮಾಡಿದೆ.
ಘಟನೆ ಕುರಿತಂತೆ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಚಿತ್ರದ ನಿರ್ಮಾಪಕ ತ್ರಿವಿಕ್ರಮ್ ಬೆಳ್ತಂಗಡಿ (Trivikram Belthangadi) ಕೊರಗಜ್ಜನ ಸಿನಿಮಾ ಮಾಡಬಾರದು ಅನ್ನುವುದೇ ಇಂತಹ ಘಟನೆಗಳಿಗೆ ಕಾರಣ. ದೈವ ನರ್ತಕರೆಂದು ಹೇಳಿಕೊಂಡು ಬಂದು ಇಂತಹ ಗಲಾಟೆ ಮಾಡುತ್ತಿದ್ದಾರೆ. ಈ ಹಿಂದೆಯೂ ಹೀಗಾಗಿದೆ, ಇಂದಿನ ಘಟನೆಯಲ್ಲಿ ಸಿನಿಮಾ ಟೀಮ್ ಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಸೆಟ್ ಹಾಳಾಗಿದೆ. ಹೀಗಾಗಿಯೇ ಚಿತ್ರೀಕರಣ ಸ್ಥಗಿತಗೊಳಿಸಿದ್ದೇವೆ ಅಂದಿದ್ದಾರೆ.
ಇನ್ನು ಸುಧೀರ್ ಅತ್ತಾವರ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ್ದು, ಚಿತ್ರೀಕರಣದ ವೇಳೆ ಶುಭಾ ಪೂಂಜ ಅವರಿಗೆ ಕೆಲ ಯುವಕರು ಕಿರಿಕ್ ಮಾಡಿದ್ದು, ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದೆ. ಯುವಕರು ಅದ್ಯಾಕೆ ಅಸಭ್ಯ ವರ್ತನೆ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಇದೀಗ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು ಅಂದಿದ್ದಾರೆ. ಅಚ್ಚರಿ ಅನ್ನುವಂತೆ ಸ್ಥಳಕ್ಕೆ ಬಂದ ಯುವಕರು ಸಾಗರದ ಬಿಜೆಪಿ ಘಟಕದವರೆಂದು ಎಂದು ಹೇಳಿಕೊಂಡಿದ್ದಾಗಿ ಸುಧೀರ್ ಮಾಹಿತಿ ನೀಡಿದ್ದು, ಸಾಗರದ ಬಿಜೆಪಿ ಘಟಕಕ್ಕೂ ಈ ಘಟನೆಗೂ ಏನು ಸಂಬಂಧ ಅನ್ನೋದು ಪ್ರಶ್ನೆಯಾಗಿದೆ.
ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಕಳಸದಲ್ಲಿ ನಡೆದ ಈ ಘಟನೆಯ ಬಗ್ಗೆ ಚಿತ್ರತಂಡ ಇದೂವರೆಗೂ ದೂರನ್ನು ದಾಖಲು ಮಾಡಿಲ್ಲ ಯಾಕೆ ಅನ್ನೋದು ಮತ್ತೊಂದು ಪ್ರಶ್ನೆಯಾಗಿದೆ.
ಈ ಚಿತ್ರತಂಡಕ್ಕೆ ಸಮಸ್ಯೆಗಳು ಹೊಸದಲ್ಲ, ಚಿತ್ರೀಕರಣ ಪ್ರಾರಂಭವಾದ ದಿನದಿಂದಲೂ ಸಂಕಷ್ಟಗಳನ್ನು ಚಿತ್ರತಂಡ ಎದುರಿಸುತ್ತಿದೆ.
ಚಿತ್ರೀಕರಣದ ಆರಂಭಕ್ಕೂ ಮೊದಲು ಪುತ್ತೂರಿನಲ್ಲಿ ಸೆಟ್ ನಿರ್ಮಾಣದ ವೇಳೆ ಸೆಟ್ ಕೆಲಸಗಾರರು ಯಾವುದೋ ಆವೇಶಕ್ಕೆ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದ್ದರು. ಸ್ಥಳಿಯರು ಅರಶಿನ ನೀರನ್ನು ಸಿಂಪಡಿಸಿ, ಸ್ಥಳೀಯ ಆಸ್ಪತ್ರೆಗೂ ದಾಖಲಿಸಿದ್ದರು.ಆ ನಂತ್ರ ಸೆಟ್ ಕೆಲಸಕ್ಕೆ ಜನ ಸಿಗದೇ ಪರದಾಡುವಂತಾಗಿತ್ತು.
ಸೆಟ್ ಹಾಕಬೇಕಿದ್ದ ಆ ಜಾಗವು ಕರಾವಳಿಯ ಉಗ್ರ ರೂಪದ ದೈವ ಗುಳಿಗನ ಸ್ಥಳವೆಂದು ಸ್ಥಳಿಯರು ಈ ವೇಳೆ ತಿಳಿಸಿದ್ದರು. ಬಳಿಕ ಪುತ್ತೂರಿನಿಂದ ಬೆಳ್ತಂಗಡಿಯ ಅರಣ್ಯ ಪ್ರದೇಶಕ್ಕೆ ಸೆಟ್ ಕೆಲಸವನ್ನು ಸ್ಥಳಾಂತರ ಮಾಡಲಾಗಿತ್ತು. ಇದಾದ ನಂತರವೂ ಸಮಸ್ಯೆ ಕಾಣಿಸಿಕೊಂಡ ಕಾರಣ, ನಿರ್ದೇಶಕ ಸುಧೀರ್ ಅತ್ತಾವರ ವಿಶೇಷವಾದ ದೈವ ಕಾರ್ಯವೊಂದನ್ನು ನೆರವೇರಿಸಿದ್ದರು ಕೂಡಾ.
ಆದರೆ ಕಳಸದ ಘಟನೆಯ ಬಗ್ಗೆ ಸ್ಥಳೀಯರು ಹೇಳುವುದೇ ಬೇರೆ, ಶೂಟಿಂಗ್ ವೇಳೆ ಅಸಭ್ಯ ವರ್ತನೆ ಅನ್ನುವ ಅರೋಪದಲ್ಲಿ ಅರ್ಥವೇ ಇಲ್ಲ. ಶೂಟಿಂಗ್ ನಡೆಯುತ್ತಿರುವ ಸ್ಥಳಕ್ಕೆ ನಾವು ತೆರೆಳಿದ್ದು ಹೌದು, ಈ ವೇಳೆ ಚಿತ್ರ ತಂಡವನ್ನು ಯಾವ ಸಿನಿಮಾ, ಯಾವ ಹಾಡು ಎಂದು ಪ್ರಶ್ನಿಸಿದ್ದೇವೆ. ಕೊರಗಜ್ಜನ ಹಾಡಿನ ಶೂಟಿಂಗ್ ಎಂದು ತಿಳಿದ ನಾವು, ಇಲ್ಲಿ ಇಂತಹ ಶೂಟಿಂಗ್ ಮಾಡದಂತೆ ತಿಳಿಸಿದ್ದೇವೆ. ಜೊತೆಗೆ ಅವರ ಬಳಿ ಯಾವುದೇ ಅನುಮತಿಯೂ ಇರಲಿಲ್ಲ. ಮಾತ್ರವಲ್ಲದೆ ಈ ವೇಳೆ ಶುಭಾ ಪೂಂಜ ಎಲ್ಲಿ ಇದ್ದರು ಅನ್ನೋ ಮಾಹಿತಿಯೂ ನಮಗಿರಲಿಲ್ಲ. ಹೀಗಾಗಿ ಅವರೊಂದಿಗೆ ಅಸಭ್ಯ ವರ್ತನೆ ಮಾಡಿದ್ದೇವೆ ಅನ್ನೋದು ಬರೀ ಸುಳ್ಳು ಅಂದಿದ್ದಾರೆ. ಹಾಗಾದ್ರೆ ಸತ್ಯ ಯಾವುದು..?
ಈ ಬಗ್ಗೆ ಮಾತನಾಡಿರುವ ಶುಭಾ ಪೂಂಜಾ, ನಾನು ಶೂಟಿಂಗ್ನಲ್ಲಿ ಭಾಗವಹಿಸಿದ್ದೆ. ಆ ಸಮಯದಲ್ಲಿಯೇ ಒಂದು ಗುಂಪು ಆಗಮಿಸಿತ್ತು. ಆ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಕಲಾವಿದರಿಗೆ ಏನೂ ಆಗಬಾರದು ಎಂಬ ಕಾರಣಕ್ಕೆ ನಿರ್ದೇಶಕರು ನಮ್ಮನ್ನು ಅಲ್ಲಿಂದ ಹೋಮ್ ಸ್ಟೇ ಬಳಿ ಇದ್ದ ಕ್ಯಾರವಾನ್ ಗೆ ಕಳುಹಿಸಿದ್ರು. ಅದಾದ ನಂತರ ಅಲ್ಲೇನೂ ನಡೀತು ಅಂತ ಗೊತ್ತಿಲ್ಲ. ನನಗೆ ಯಾರಿಂದಲೂ ಏನೂ ಸಮಸ್ಯೆಯಾಗಿಲ್ಲ. ಯಾರೂ ನನ್ನ ಕೈ ಹಿಡಿದು ಎಳೆದಿಲ್ಲ ಅಂದಿದ್ದಾರೆ ಶುಭಾ.
Discussion about this post