ಬೆಂಗಳೂರು : ನಟ ಕಿಚ್ಚ ಸುದೀಪ ಅವರು ಸದ್ದಿಲ್ಲದೆ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಮೊದಲು ಮಾನವನಾಗು ಅನ್ನುತ್ತಲೇ ಸಂಕಷ್ಟದಲ್ಲಿರುವ ಮಂದಿಯ ಕೈ ಹಿಡಿಯುವ ಕಾರ್ಯವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಕೊರೋನಾ ಸಂಕಷ್ಟ ಕಾಲದಲ್ಲಿ ಮಾಡಿದ ಹಲವು ಕಾರ್ಯಗಳು ಸಾಕಷ್ಟು ಸುದ್ದಿಯಾಗಿತ್ತು.
ಇದೀಗ ಇದೇ ಟ್ರಸ್ಟ್ ಮೂಲಕ ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿರುವ ಸರಕಾರಿ ಶಾಲೆಯನ್ನು ಸುದೀಪ್ ದತ್ತು ಪಡೆದಿದ್ದಾರೆ. ಟ್ರಸ್ಟ್ ಪ್ರಸ್ತಾಪಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಪ್ಪಿಗೆಯನ್ನು ಕೊಟ್ಟಿದ್ದು, ಶಾಲೆಗಾಗಿ ನಾವು ನೀವು ಯೋಜನೆಯಡಿಯಲ್ಲಿ ಶಾಲೆ ದತ್ತು ಪಡೆಯಲಾಗಿದ್ದು ಮುಂದಿನ ಕಾರ್ಯಗಳು ಪ್ರಗತಿಯಲ್ಲಿದೆ.
ಈ ಸರ್ಕಾರಿ ಶಾಲೆ 133 ವರ್ಷ ಹಳೆಯ ಶಾಲೆ ಅನ್ನುವ ಹೆಗ್ಗಳಿಕೆಯನ್ನು ಕೂಡಾ ಹೊಂದಿದೆ. ಹೀಗಾಗಿ ಈ ಶಾಲೆ ಸುದೀಪ್ ನೇತೃತ್ವದಲ್ಲಿ ಹೇಗೆ ಕಂಗೊಳಿಸಲಿದೆ ಅನ್ನುವ ಕುತೂಹಲ ಎಲ್ಲರಲ್ಲಿದೆ. ಒಟ್ಟಿನಲ್ಲಿ ಸರ್ಕಾರಿ ಶಾಲೆ ಉಳಿಸಿ ಕಾರ್ಯಕ್ಕೆ ಸುದೀಪ್ ಕೈ ಜೋಡಿಸಿರುವುದು ಉತ್ತಮ ಬೆಳವಣಿಗೆಯೇ ಸರಿ.
ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆ ( ಹಿರಿಯೂರು 1 ಶಾಲೆ, ಚಳ್ಳಕೆರೆ 3 ಶಾಲೆ) , ಶಿವಮೊಗ್ಗ ಜಿಲ್ಲೆಯ 4 ಶಾಲೆಗಳನ್ನು ಸುದೀಪ್ ಅವರು ಕಳೆದ ವರ್ಷ ದತ್ತು ಪಡೆದಿದ್ದರು. ಸಾಗರ ಅವಿಗೆ ಶಾಲೆಗೆ,ಹಾಲಸಿಗೆ ಗ್ರಾಮದ ಶಾಲೆ ,ಎಂ ಎನ್ ಹಳ್ಳಿ ಮತ್ತು ಎಸ್ ಎನ್ ನಗರದ ಶಾಲೆಗಳ ಪಟ್ಟಿಗೆ ಬಿ ಎಚ್ ರಸ್ತೆಯ ಶಾಲೆಯೂ ಸೇರಿದೆ.
Discussion about this post