ಬೆಂಗಳೂರು : ಚೈನಾ ವೈರಸ್ ಕಾರಣದಿಂದ ಯಾರು ತತ್ತರಿಸಿಲ್ಲ ಹೇಳಿ. ನಾಡಿನ ಪ್ರತಿಯೊಬ್ಬರಿಗೂ ಕೊರೋನಾ ಸೋಂಕಿನ ಬಿಸಿ ತಟ್ಟಿದೆ. ಅದರಲ್ಲೂ ದುಡಿದು ತಿನ್ನುವ ಮಂದಿಯ ಕಥೆಯನ್ನು ಕೇಳುವುದೇ ಬೇಡ. ದಿನದ ಸಂಬಳ, ವಾರದ ಸಂಬಳ, ತಿಂಗಳ ಸಂಬಳ ಎಂದು ಕೆಲಸ ಮಾಡುವವರ ಬಹುತೇಕ ಮನೆಗಳಲ್ಲಿ ಊಟಕ್ಕೂ ಸಂಕಷ್ಟ ಎದುರಾಗಿದೆ.
ಇದಕ್ಕೆ ಚಿತ್ರರಂಗವೂ ಹೊರತಾಗಿಲ್ಲ. ಚಲನಚಿತ್ರ ನಿರ್ಮಾಣ ಸೇರಿದಂತೆ ವಿವಿಧ ಹಂತಗಳಲ್ಲಿ ಕೆಲಸ ಮಾಡುವ ತಂತ್ರಜ್ಞರು ಹಾಗೂ ಕಾರ್ಮಿಕರ ಬದುಕು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಸೆಲೆಬ್ರೆಟಿಗಳು ತಮ್ಮದೇ ಕ್ಷೇತ್ರದ ಮಂದಿಯ ಸಹಾಯಕ್ಕೆ ಧಾವಿಸಿದ್ದಾರೆ.
ಇದೀಗ ನಟ ಯಶ್ ಕೂಡಾ ಸಹಾಯ ಹಸ್ತ ಚಾಚಿದ್ದು, ಸಿನಿಮಾ ಕಲಾವಿದರು,ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ನೇರವಾಗಿ ಹಣ ತಲುಪಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಬರೆದುಕೊಂಡಿರುವ ಯಶ್ “ ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಮ್ಮಿ ಬುಡಮೇಲು ಮಾಡಿದೆ. ಅದರಲ್ಲೂ ಕಳೆದೊಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ. ಹೌದು ಇದು ಬರೀ ಮಾತನಾಡುವ ಸಮಯವಲ್ಲ. ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ. ಹಾಗಾಗಿ ಸುಮಾರು 3000 ಸಾವಿರಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು,ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂಪಾಯಿಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ.
ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷರಾದ ಸಾರಾ ಗೋವಿಂದು, ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರನಾಥ್ ಅವರೊಂದಿಗೆ ಚರ್ಚಿಸಿದ್ದೇನೆ. ನಮ್ಮ ಕಲಾವಿದರು ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣವೇ ಇದು ಕಾರ್ಯ ರೂಪಕ್ಕೆ ಬರಲಿದೆ.
ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲಾ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು…ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ…ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎಂಬುದು ನನ್ನ ಆಶಯ…”
Discussion about this post