ಬೆಂಗಳೂರು : ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸವಾಗುತ್ತಿಲ್ಲ ಅನ್ನುವ ಆರೋಪ ಇಂದು ನಿನ್ನೆಯದಲ್ಲ. ಅದರಲ್ಲೂ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರಕ್ಕೆ ನಡೆದಿರುವ ಎಸಿಬಿ ದಾಳಿಗಳೇ ಸಾಕ್ಷಿ. ಅಷ್ಟು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಅಪ್ ಲೋಡ್ ಮಾಡಿರುವ ವಿಡಿಯೋಗಳು ಕೂಡಾ ಅಧಿಕಾರಿಗಳ ಲಂಚಗುಳಿತನವನ್ನು ಸಾರಿ ಸಾರಿ ಹೇಳುತ್ತಿವೆ.
ಈ ನಡುವೆ ರವಿಕೃಷ್ಣಾ ರೆಡ್ಡಿ ನೇತೃತ್ವದ ಕೆ.ಆರ್.ಎಸ್ ಪಕ್ಷ ಹಮ್ಮಿಕೊಂಡಿರುವ ಲಂಚ ವಿರೋಧಿ ಹೋರಾಟ ಅಧಿಕಾರಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈಗಾಗಲೇ ಕೆ.ಆರ್.ಎಸ್ ಪಕ್ಷದ ಹೋರಾಟದ ವಿರುದ್ಧ ಅಧಿಕಾರಿಗಳ ಒಂದು ವರ್ಗ ಸಿಡಿದೆದ್ದಿದೆ. ಅದರಲ್ಲೂ ಮಂಡ್ಯದ ಪಾಂಡವಪುರದಲ್ಲಿ ನಡೆದ ಘಟನೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ.
ಈ ನಡುವೆ ಸಾರ್ವಜನಿಕರಿಂದ ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ಹಲ್ಲೆಯಾಗುತ್ತಿದೆ ಎಂದು ಆರೋಪಿಸಿ ಕೆಎಎಸ್ ಅಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ನೇತೃತ್ವದಲ್ಲಿ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಅಧಿಕಾರಿಗಳು, ಜಿಲ್ಲಾಧಿಕಾರಿ, ಉಪವಿಭಾಗಧಿಕಾರಿ, ತಹಶೀಲ್ದಾರ್ ಕಚೇರಿಗೆ ಬರುವ ಕೆಲ ಸಂಘಟನೆಗಳು, ಸಾರ್ವಜನಿಕರು ಗುಂಪಾಗಿ ಬಂದು ಅಧಿಕಾರಿಗಳು, ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸುತ್ತಿದ್ದಾರೆ.
ಹೀಗಾಗಿ ಅನುಮತಿ ಇಲ್ಲದೆ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡದ ರೀತಿ ಸುತ್ತೋಲೆ ಹೊರಡಿಸಬೇಕು ಹಾಗೂ ಐಪಿಸಿ ಮತ್ತು ಸಿ.ಆರ್.ಪಿ.ಸಿ ಕಾಯ್ದೆಗೆ ತಿದ್ದುಪಡಿ ತಂದು ಮಹಾರಾಷ್ಟ್ರ ಮಾದರಿಯಲ್ಲಿ ಕಾನೂನು ಜಾರಿಗೆ ತನ್ನಿ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಆದರೆ ಈಗಾಗಲೇ ಸರ್ಕಾರಿ ನೌಕರರ ರಕ್ಷಣೆಗೆ ರಾಜ್ಯದಲ್ಲಿ ಕಠಿಣ ಕಾನೂನುಗಳಿವೆ. ಲಂಚ ಪಡೆಯದ ಮತ್ತು ಸಾರ್ವನಿಕರಿಗೆ ಸ್ಪಂದಿಸುವ ಅಧಿಕಾರಿಗಳಿಗೆ ಈ ಕಾನೂನು ಈ ತನಕ ರಕ್ಷಣೆ ಕೊಟ್ಟಿದೆ. ಜೊತೆಗೆ ಭ್ರಷ್ಟನಲ್ಲದ ಅದ್ಯಾವ ಅಧಿಕಾರಿಯನ್ನೂ ಅದ್ಯಾವ ಸಂಘಟನೆಗೂ ಅಲುಗಾಡಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಹೊಸ ಕಾನೂನಿನ ಅಗತ್ಯವಿದೆಯೇ ಅನ್ನುವುದು ಪ್ರಶ್ನೆ. ಕೆಲಸಕ್ಕೆ ಸೇರುವಾಗ ಲಂಚ ಕೊಟ್ಟಿಲ್ಲ, ಕೆಲಸಕ್ಕೆ ಸೇರಿದ ಮೇಲೆ ಲಂಚ ಮುಟ್ಟಿಲ್ಲ, ಮುಂದೆ ಮುಟ್ಟೋದಿಲ್ಲ ಎಂದು ಅಧಿಕಾರಿಗಳು ತಮ್ಮ ಕಚೇರಿಯ ಮುಂದೆ ಇಂತಹ ಫಲಕ ಮುದ್ರಿಸಿ ಬಹಿರಂಗವಾಗಿ ಘೋಷಿಸಲಿ, ಇಂತಹ ಪ್ರತಿಭಟನೆಯ ಅಗತ್ಯವೇ ಬರೋದಿಲ್ಲ.
Discussion about this post