ಬೆಂಗಳೂರು : ಕಳೆದ 10 ದಿನಗಳಲ್ಲಿ ಬೆಂಗಳೂರು ಒಂದರಲ್ಲೇ 500ಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ ಸೋಂಕು ತಗುಲಿದೆ ಅನ್ನುವ ಆತಂಕಕಾರಿ ಸುದ್ದಿಯ ನಡುವೆ ಆಗಸ್ಟ್ 23 ರಿಂದ 9 ರಿಂದ 12ನೇ ವರೆಗಿನ ತರಗತಿಗಳು ಪ್ರಾರಂಭವಾಗುವುದು ಖಚಿತ. ಈ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರೇ ಹೇಳಿದ್ದು, ಶಾಲಾ-ಕಾಲೇಜುಗಳ ಭೌತಿಕ ತರಗತಿಗಳು ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಮಾರ್ಗಸೂಚಿಯನ್ನೂ ಸಿದ್ದಪಡಿಸಲಾಗಿದೆ.
ಇಂದು ಈ ಮಾರ್ಗಸೂಚಿ ಬಿಡುಗಡೆಯಾಗಲಿದ್ದು, ಭೌತಿಕ ತರಗತಿಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಹಲವು ಕಾಮನ್ ನಿಯಮಗಳನ್ನು ಎಂದಿಗೂ ಮರೆಯುವಂತಿಲ್ಲ.
ಇದರೊಂದಿಗೆ ಇನ್ನೂ ಹಲವು ವಿಷಯಗಳನ್ನು ಮಾರ್ಗಸೂಚಿಗೆ ಸೇರಿಸಲು ಶಿಕ್ಷಣ ಸಚಿವರು ಬಯಸಿದ್ದು, ತರಗತಿಗಳನ್ನು ಹೇಗೆ, ಎಷ್ಟು ಹೊತ್ತು ನಡೆಸಬೇಕು, ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಏನು ಮಾಡಬೇಕು ಅನ್ನುವ ಕುರಿತಂತೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾರ್ಗಸೂಚಿ ಅಂತಿಮಗೊಳಿಸಲಿದ್ದಾರೆ.
ಇನ್ನು ಮಕ್ಕಳಲ್ಲಿ ಸೋಂಕು ಹೆಚ್ಚುತ್ತಿರುವ ಬಗ್ಗೆ ಯಾವ ವಯಸ್ಸಿನವರಲ್ಲಿ ಸೋಂಕು ಹೆಚ್ಚಾಗುತ್ತಿದೆ ಮತ್ತು ಅದರ ತೀವ್ರತೆ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆಯಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಶಾಲೆ ಪ್ರಾರಂಭಕ್ಕೂ ಮುನ್ನ ಮತ್ತೊಮ್ಮೆ ಕೊರೋನಾ ಸಲಹಾ ಸಮಿತಿಯ ಸಲಹೆಯನ್ನು ಪಡೆಯಲು ನಿರ್ಧರಿಸಲಾಗಿದೆ.
Discussion about this post