ಬೆಂಗಳೂರು : ಜುಲೈ 25ಕ್ಕೆ ಸಂದೇಶ ಬರಲಿದೆ, ಆಮೇಲೆ ಮುಂದಿನ ತೀರ್ಮಾನ ಅನ್ನುವ ಮೂಲಕ ನನ್ನ ಪರ್ವ ಮುಗಿಯಿತು ಅನ್ನುವುದನ್ನು ಪರೋಕ್ಷವಾಗಿ ಸಾರಿದ್ದರು ಸಿಎಂ ಯಡಿಯೂರಪ್ಪ. ಆದರೆ ಇದೀಗ ಜುಲೈ 25ಕ್ಕೂ ಮುಗಿಯುತ್ತಾ ಬಂತು, ಹೈಕಮಾಂಡ್ ಕಡೆಯಿಂದ ಯಾವುದೇ ಸಂದೇಶ ಬಂದಿಲ್ಲ. ಅಲ್ಲಿಗೆ ಡೆಲ್ಲಿಯಿಂದ ಸಂದೇಶ ಬರಲಿದೆ ಅನ್ನುವುದು ಕಟ್ಟು ಕಥೆಯೇ, ಕುರ್ಚಿ ಉಳಿಸಿಕೊಳ್ಳಲು ಹೂಡಿದ ತಂತ್ರವೇ ಅನ್ನುವ ಅನುಮಾನ ಶುರುವಾಗಿದೆ.
ಈ ನಡುವೆ ನಾಯಕತ್ವ ಬದಲಾವಣೆ ನಾಟಕ ನಾಳೆಗೆ ಮುಂದೂಡಿಕೆಯಾಗಲಿದೆ. ನಾಳೆ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ಸಾಧನಾ ಸಮಾವೇಶ ನಡೆಯಲಿದೆ. ಬೆಳಗ್ಗೆ ಸಾಧನಾ ಸಮಾವೇಶ ನಡೆಯಲಿದ್ದು, ಮಧ್ಯಾಹ್ನ ಬಳಿಕ ಯಡಿಯೂರಪ್ಪ ಉತ್ತರ ಕನ್ನಡ ಪ್ರವಾಸಕ್ಕೆ ತೆರಳುವುದು ನಿಗದಿಯಾಗಿದೆ. ಒಂದು ವೇಳೆ ರಾಜೀನಾಮೆ ಕೊಡುವುದೇ ಆಗಿದ್ರೆ ರಾಜಭವನ ಭೇಟಿ ನಿಗದಿಯಾಗಬೇಕಿತ್ತು. ಈಗಿನವರೆಗೂ ಯಡಿಯೂರಪ್ಪ ರಾಜಭವನಕ್ಕೆ ಹೋಗುವ ಕಾರ್ಯಕ್ರಮ ನಿಗದಿಯಾಗಿಲ್ಲ.
ಇನ್ನು ಯಡಿಯೂರಪ್ಪ ಕುರ್ಚಿಯಿಂದ ಇಳಿಯಬಾರದು ಎಂದು ಮಠಾಧೀಶರು ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಬಿಟ್ರೆ, ಅದ್ಯಾವ ಬಿಜೆಪಿ ಶಾಸಕನೂ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರೆ ಹುಷಾರ್ ಎಂದು ಹೇಳಿಯೇ ಇಲ್ಲ. ಹಿಂದೆಲ್ಲಾ ರೇಣುಕಾಚಾರ್ಯ ಸೇರಿದಂತೆ ಅನೇಕ ಶಾಸಕರು ಯಡಿಯೂರಪ್ಪ ಅವರ ಪರ ಭರ್ಜರಿ ಬ್ಯಾಟಿಂಗ್ ಮಾಡ್ತಾ ಇದ್ರು. ಆದರೆ ಈ ಸಲ ಬಹುತೇಕ ಶಾಸಕರು ಹೈಕಮಾಂಡ್ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ಮಾತ್ರವಲ್ಲದೆ ಯಡಿಯೂರಪ್ಪ ಒಳ್ಳೆಯ ಸಿಎಂ, ಒಳ್ಳೆಯ ಕೆಲಸಗಾರ, ಪಕ್ಷ ಕಟ್ಟುವಲ್ಲಿ ದೊಡ್ಡ ಅವರ ಕೊಡುಗೆ ದೊಡ್ಡದ್ದು ಎಂದು ವಿದಾಯದ ಮಾತುಗಳನ್ನು ಹೇಳುತ್ತಿದ್ದಾರೆ. ಈ ಎರಡೂ ಬೆಳವಣಿಗೆಗಳನ್ನು ನೋಡಿದರೆ ಕೇಸರಿ ಮನೆ ಗೊಂದಲದ ಗೂಡಾಗಿದೆ ಅನ್ನುವುದು ಸ್ಪಷ್ಟ. ಈ ಎಲ್ಲಾ ಗೊಂದಲಗಳಿಗೆ ನಾಳೆ ಮಧ್ಯಾಹ್ನದ ಒಳಗೆ ತೆರೆ ಬೀಳಲಿದೆ.
Discussion about this post