ಪುತ್ತೂರು ಬಿಜೆಪಿಯ ಭದ್ರ ನೆಲೆ – ಇಲ್ಲಿ ಬ್ಯಾನರ್ ಕಟ್ಟುವುದಕ್ಕೆ ಸೀಮಿತವಾದ್ರ ಕಾರ್ಯಕರ್ತರು
ಹೇಳಿ ಕೇಳಿ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಭದ್ರಕೋಟೆ. ಹಿಂದುತ್ವ ಆಧಾರದಲ್ಲೇ ಇಲ್ಲಿ ಬಿಜೆಪಿ ಸದಾ ಗೆಲುವಿನ ನಗೆ ಬೀರುತ್ತಿದೆ. ಆದರೆ ಇದೀಗ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಹಿಂದುತ್ವದ ಹೆಸರಿನಲ್ಲಿ ದುಡಿಯೋ ಕಾರ್ಯಕರ್ತರು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದಾರೆ. ಹಿಂದುತ್ವಕ್ಕೆ ಜೈ ಆದರೆ ಬಿಜೆಪಿಗೆ ಕೈ ಅನ್ನೋದು ಹಲವು ಯುವ ಕಾರ್ಯಕರ್ತರ ಮಾತು.
ಜಿಲ್ಲಾ ಬಿಜೆಪಿಯ ಹಿರಿಯ ನಾಯಕರು ಕಾರ್ಯಕರ್ತರನ್ನು ಕಡೆಗಣಿಸಿದ ಕಾರಣದಿಂದಲೇ ಇಲ್ಲಿ ಪ್ರತೀ ಸಲ ಬಂಡಾಯದ ಬಾವುಟ ಹಾರುತ್ತದೆ. ಆದರೆ ದೊಡ್ಡ ದೊಡ್ಡ ಹಿರಿಯ ತಲೆಗಳ ಅಬ್ಬರದ ನಡುವೆ ಈ ಬಂಡಾಯದ ದನಿ ಅಡಗಿ ಹೋಗುತ್ತದೆ.
ಆದರೆ ಕಳೆದ ಬಾರಿ ಬಿಜೆಪಿ ನಾಯಕರ ಏಕಮುಖ ಧೋರಣೆ ವಿರುದ್ಧ ಸೆಟೆದು ನಿಂತು ಸದ್ದು ಮಾಡಿದ್ದು ಅರುಣ್ ಕುಮಾರ್ ಪುತ್ತಿಲ.ಆಗ ಶಾಸಕರಾಗಿದ್ದ ಸಂಜೀವ ಮಠಂದೂರು ಅಣಬೆ ಹೇಳಿಕೆಯನ್ನು ಕೊಟ್ಟಿದ್ದು ಉರಿವ ಬೆಂಕಿಗೆ ತುಪ್ಪ ಸುರಿದಂತಾಯ್ತು. ದೊಡ್ಡ ಸಂಖ್ಯೆಯಲ್ಲಿ ಯುವ ಕಾರ್ಯಕರ್ತರು ಬಿಜೆಪಿ ಟಾಟಾ ಬೈ ಬೈ ಹೇಳಿ ಪುತ್ತಿಲ ಬೆನ್ನಿಗೆ ನಿಂತರು. ಇಡೀ ಕಮಲ ಪಡೆಯೇ ನಡುಗಿ ಹೋಯ್ತು.
ಮಾಜಿ ಸಿಎಂ ಸದಾನಂದ ಗೌಡರು ಪುತ್ತೂರಿಗೆ ಬಂದು ಹಿಂದೊಮ್ಮೆ ಶನಿ ಬಿಡಿಸಿದ್ದೇವೆ ಅನ್ನೋ ಹೇಳಿಕ ಕೊಟ್ಟು ಬೆಂಗಳೂರು ಬಸ್ ಹತ್ತಿದ್ರು. ಅದೊಂದು ಹೇಳಿಕೆಯಿಂದ ಮತ್ತಷ್ಟು ಮತಗಳು ಬಿಜೆಪಿಗೆ ನಷ್ಟವಾಯ್ತು. ಆನಂತರ ನಡೆದ ಬ್ಯಾನರ್ ಪ್ರಕರಣ ಸೇರಿದಂತೆ ಹಲವಾರು ಘಟನೆಗಳು ಪುತ್ತಿಲ ಪರಿವಾರದ ಬಲ ಹೆಚ್ಚಿಸುತ್ತಾ ಹೋಯ್ತು. ಪುತ್ತೂರಿಗೆ ಸೀಮಿತವಾಗಿದ್ದ ಅರುಣ್ ಕುಮಾರ್ ಪುತ್ತಿಲ ಕರಾವಳಿಯ ಹಿಂದೂ ನಾಯಕನಾಗಿ ಹೋದ್ರು.
ಹಿಂದೊಮ್ಮೆ ಯಡಿಯೂರಪ್ಪ ಕೆಜೆಪಿ ಕಟ್ಟಿ ಬಿಜೆಪಿಯಲ್ಲಿ ನಡುಕ ಹುಟ್ಟಿಸಿದ್ದರು, ಆದೇ ರೀತಿ ಪುತ್ತಿಲ ಪರಿವಾರ ದಕ್ಷಿಣ ಕನ್ನಡ ಬಿಜೆಪಿ ಪಾಲಿಗೆ ವಿಲನ್ ಆಗಿದ್ದು ಸುಳ್ಳಲ್ಲ.
ಇದನ್ನೂ ಓದಿ : ಹಿಂದೂಗಳಲ್ಲದವರಿಗೆ ಪಳನಿ ದೇವಾಲಯ Palani temple ಪ್ರವೇಶವಿಲ್ಲ
ಈ ನಡುವೆ ಲೋಕಸಭಾ ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಘರ್ ವಾಪ್ಸಿ ಪ್ರಕ್ರಿಯೆಗೆ ದೆಹಲಿ ಮಟ್ಟದಲ್ಲಿ ಚಾಲನೆ ನೀಡಲಾಗಿದ್ದು, ಪಕ್ಷ ಬಿಟ್ಟು ಹೋದವರನ್ನು ಮತ್ತೆ ಪಕ್ಷಕ್ಕೆ ಕರೆ ತರಲೇಬೇಕು ಎಂದು ವಿಜಯೇಂದ್ರ ಅಂಡ್ ಟೀಂಗೆ ಸೂಚಿಸಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆ ಗ್ರಾಮೀಣ ಭಾಗದಲ್ಲಿ ಮೋದಿ ಅಲೆಗೆ ತಡೆ ಗೋಡೆಯಾಗಿ ಕೂತಿದೆ. ಹೀಗಾಗಿ ಮೋದಿ ಅಲೆಯ ಅಬ್ಬರ ಏರಬೇಕಾದ್ರೆ ಸಂಘಟನೆ ಬಲಗೊಳಿಸುವುದೊಂದೇ ದಾರಿ ಎಂದು ಬಣ ರಾಜಕೀಯಕ್ಕೆ ಬ್ರೇಕ್ ಹಾಕಿ, ಯಾವ್ಯಾವ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅನಿವಾರ್ಯವಾಗಿರೋ ನಾಯಕರನ್ನು ಘರ್ ವಾಪ್ಸಿ ಮಾಡುವಂತೆ ಸೂಚಿಸಲಾಗಿದೆ.
ಇದರ ಮುಂದುವರಿದ ಭಾಗವಾಗಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿಗೆ ಕರೆ ತರಲು ಸರ್ಕಸ್ ಪ್ರಾರಂಭವಾಗಿದೆ. ರಾಷ್ಟ್ರ ಮತ್ತು ರಾಜ್ಯ ನಾಯಕರು ಈಗಾಗಲೇ ಶೀಘ್ರದಲ್ಲೇ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಸೂಚಿಸಿದ್ದಾರೆ ಜೊತೆಗೆ ಜಿಲ್ಲಾ ಮಟ್ಟದ ಪದಾಧಿಕಾರಿ ಹುದ್ದೆ ಅಥವಾ ಅದಕ್ಕೆ ಸಮಾನವಾದ ಹುದ್ದೆಯನ್ನು ನೀಡಲು ಯಾವುದೇ ಅಭ್ಯಂತರವಿಲ್ಲ ಅಂದಿದ್ದಾರೆ. ಜೊತೆಗೆ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆಯೂ ಸೂಚಿಸಿದ್ದಾರೆ.
ಇದನ್ನೂ ಓದಿ : ಬಹು ಬೇಡಿಕೆಯ ನಟಿಯಾಗುವತ್ತ ಆಪಲ್ ಕೇಕ್ ಖ್ಯಾತಿಯ Shubha Raksha
ಕೊನೆಯ ಮಾತೇ ಇದೀಗ ಸಮಸ್ಯೆಯಾಗಿ ಕೂತಿದೆ. ಜಿಲ್ಲಾ ಬಿಜೆಪಿ ಮತ್ತು ಪುತ್ತೂರು ಬಿಜೆಪಿಯ ನಾಲ್ಕೈದು ನಾಯಕರು ಹಾಗೂ ಪುತ್ತೂರಿನ ಮಾಜಿ ಜನಪ್ರತಿನಿಧಿಯೊಬ್ಬರು ಅರುಣ್ ಪುತ್ತಿಲ ಪಕ್ಷಕ್ಕೆ ಬರೋದು ಬೇಡ, ಬರುವುದೇ ಆಗಿದ್ರೆ ಮೂರು ವರ್ಷ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಲಿ ಅನ್ನೋ ಕಂಡಿಷನ್ ಹಾಕಿದ್ದಾರೆ.
ಪಾಪ ರಾಜ್ಯ ನಾಯಕರು ಕೂಡಾ ಅವರ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ. ಯಾವಾಗ ಮಾತು ಕೇಳುವುದಿಲ್ಲ ಎಂದು ಗೊತ್ತಾಯೋ ದಂಡಂ ದಶಗುಣ ಅಂದಿದ್ದಾರೆ.
ಇದನ್ನೂ ಓದಿ : ಹತ್ತೂರ ಒಡೆಯನ ಸನ್ನಿಧಿಯ ಅಭಿವೃದ್ಧಿಗೆ 2 ಕೋಟಿ ರೂ ಅನುದಾನ ತಂದ ಅಶೋಕ್ ರೈ
ಇತ್ತೀಚಿಗೆ ಪುತ್ತೂರಿನಲ್ಲಿ ನಡೆದ ಸಭೆಯಲ್ಲಿ ಆ ನಾಯಕರನ್ನು ತರಾಟೆಗೆ ತೆಗೆದುಕೊಳ್ಳಲಾಗಿದ್ದು, ಪುತ್ತೂರಿನಲ್ಲಿ ಒಬ್ಬನೇ ಒಬ್ಬ ಯುವ ನಾಯಕನನ್ನು ಬೆಳೆಸಲಿಲ್ಲ, ಹಳೆಯ ನಾಯಕರೇ ಆಯಾ ಕಟ್ಟಿನ ಜಾಗದಲ್ಲಿ ಕೂತಿದ್ದೀರಿ. ಈ ಧೋರಣೆಯಿಂದಲೇ ಪಕ್ಷಕ್ಕೆ ಸೋಲಾಗುತ್ತಿದೆ. ಹೀಗೆ ವಿರೋಧ ಮಾತುಗಳ ಹಿಂದೆ ಯಾರಿದ್ದಾರೆ ಎಂದು ನಮಗೆ ಗೊತ್ತಿದೆ, ಅವರ ಹಣೆ ಬರಹವೂ ಗೊತ್ತಿದೆ, ಅವೆಲ್ಲವೂ ಹೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಈ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿಗೆ ಮತ್ತೆ ಕರೆಸಿಕೊಳ್ಳುವ ಕುರಿತಂತೆ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆವಿಯವರಿಗೆ ನೀಡಲಾಗಿದೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಕರಾವಳಿಯ ವಾಸ್ತವ ಕೊನೆಗೂ ಅರ್ಥವಾಗಿದೆ. ಹಾಗೇ ನೋಡಿದ್ರೆ ಪುತ್ತೂರಿನಲ್ಲಿ ಕಾಂಗ್ರೆಸ್ ಗೆ ಬಲ ತುಂಬಿದ್ದೇ ಬಿಜೆಪಿ. ಶಕುಂತಳಾ ಶೆಟ್ಟಿ, ಅಶೋಕ್ ರೈ ಸೇರಿದಂತೆ ಅನೇಕ ನಾಯಕರು ಕಾಂಗ್ರೆಸ್ ಗೆ ಹೋಗದಿರುತ್ತಿದ್ರೆ ಆ ಪಕ್ಷಕ್ಕೆ ಬಲ ಎಲ್ಲಿತ್ತು. ಬಿಜೆಪಿ ಭವಿಷ್ಯವಿಲ್ಲ ಎಂದು ಹೋದವರು ಕಾಂಗ್ರೆಸ್ ನಲ್ಲಿ ಭವಿಷ್ಯ ಕಟ್ಟಿಕೊಂಡಿದ್ದು ಸುಳ್ಳಲ್ಲ.
Discussion about this post