ಬೆಂಗಳೂರು : ರಾಜಕೀಯ ಸಂಧ್ಯಾ ಕಾಲದಲ್ಲಿರುವ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಹೈಕಮಾಂಡ್ ಗೆ ಕೊಟ್ಟ ಭರವಸೆಯಂತೆ 2 ವರ್ಷದ ಅಧಿಕಾರ ಪೂರೈಸಿ ಸಿಎಂ ಕುರ್ಚಿಯಿಂದ ಕೆಳಗಿಳಿದಿದ್ದಾರೆ. ಬಿಜೆಪಿ ಹೈಕಮಾಂಡ್ ಕೂಡಾ ಅವರನ್ನು ಗೌರವಯುತವಾಗಿ ಕಳುಹಿಸಿಕೊಟ್ಟಿದೆ. ಸರ್ಕಾರ 2 ವರ್ಷ ಪೂರೈಸಿದ ಸಂದರ್ಭದಲ್ಲಿ ವಿದಾಯ ಭಾಷಣ ಮಾಡಿರುವ ಅವರು ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಹಾಗೇ ನೋಡಿದರೆ ಯಡಿಯೂರಪ್ಪ ಪದತ್ಯಾಗದ ಕುರಿತಂತೆ ಯಡಿಯೂರಪ್ಪ ಅವರೇ ಗೊಂದಲಗಳನ್ನು ಸೃಷ್ಟಿಸಿದರು. ಡೆಲ್ಲಿ ಸಂದೇಶ ಬಂದ ಬಳಿಕ ನಿರ್ಧಾರ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಡದಿರುತ್ತಿದ್ರೆ ಈ ಗೊಂದಲವಿರುತ್ತಿರಲಿಲ್ಲ. ಬಿಜೆಪಿ ಇತಿಹಾಸದಲ್ಲಿ ಸಂದೇಶ ಕೊಟ್ಟು ಮುಖ್ಯಮಂತ್ರಿಗಳನ್ನು ಕೆಳಗಿಳಿಸುವ ಸಂಪ್ರದಾಯವಿಲ್ಲ. ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿಗೊಂದು ಭದ್ರ ನೆಲೆ ತಂದುಕೊಟ್ಟ ಯಡಿಯೂರಪ್ಪ ಬಗ್ಗೆ ಹೈಕಮಾಂಡ್ ಸಾಕಷ್ಟು ಒಳ್ಳೆಯ ಅಭಿಪ್ರಾಯ ಹೊಂದಿದೆ. ಈ ಕಾರಣದಿಂದಲೇ ಯಡಿಯೂರಪ್ಪ ಅವರ ನಿರ್ಗಮನ ಇತಿಹಾಸದ ಪುಟದಲ್ಲಿ ದಾಖಲಾಗುವಂತೆ ಮಾಡಲಾಗಿದೆ.
ಈ ನಡುವೆ ರಾಜ್ಯಪಾಲರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಎರಡೇ ಸಾಲಿನ ಒಕ್ಕಣೆ ಇದ್ದು, I here tender my resignation as the Chief Minister for the state of Karnataka. The Same may kindly be accepted ಎಂದು ಬರೆಯಲಾಗಿದೆ.
ಇನ್ನು ರಾಜೀನಾಮೆ ಕೊಟ್ಟು ಹೊರ ಬಂದ ಬಳಿಕ ಮಾತನಾಡಿದ ಯಡಿಯೂರಪ್ಪ ನನ್ನ ರಾಜೀನಾಮೆ ನನ್ನ ನಿರ್ಧಾರ, ಇದರಲ್ಲಿ ಮೋದಿ, ಅಮಿತ್ ಶಾ ಸೇರಿ ಬಿಜೆಪಿ ನಾಯಕರ ಒತ್ತಡವಿಲ್ಲ. ನನ್ನ ಮೇಲಿನ ಪ್ರೀತಿಯಿಂದ ಬಿಜೆಪಿಯ ಅಲಿಖಿತ ನಿಯಮವನ್ನು ಮೀರಿ ಅಧಿಕಾರ ಅನುಭವಿಸುವ ಭಾಗ್ಯ ಕೊಟ್ಟಿದ್ದಾರೆ. ಹೀಗಾಗಿ ಹೊಸಬರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ನಾನು ರಾಜೀನಾಮೆ ಕೊಟ್ಟಿದ್ದೇನೆ ಅಂದಿದ್ದಾರೆ.
Discussion about this post