ಬೆಂಗಳೂರು : ನುಡಿದಂತೆ ನಡೆಯುವುದು ತುಂಬಾ ಕಷ್ಟ. ನುಡಿಯೋದು ನಾಲಗೆಯಲ್ಲಿ ನಡೆಯೋದು ಕಾಲಲ್ಲಿ. ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರು ಸಿಎಂ ಮಾತನ್ನೇ ಕೇಳಿಸಿಕೊಳ್ಳಲು ಸಿದ್ದರಿಲ್ಲ. ಇದು ಬಯಲಾಗಿದ್ದು ಭಾನುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ.
ಮುಖ್ಯಮಂತ್ರಿಯಾದ ಬೆನ್ನಲ್ಲೇ ಸರ್ಕಾರಿ ಕಾರ್ಯಕ್ರಮಲ್ಲಿ ಹಾರ ತುರಾಯಿ ಬೇಡ, ನೆನಪಿನ ಕಾಣಿಕೆ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಆದೇಶಿಸಿದ್ದರು. ಅಷ್ಟೇ ಅಲ್ಲದೆ ಬದಲಾಗಿ ಪುಸ್ತಕವನ್ನು ಕೊಡುವ ಪರಿಪಾಠ ರೂಢಿಸಿಕೊಳ್ಳಿ ಎಂದು ಹೇಳಿದ್ದರು.
ಆಗ ಮುಖ್ಯಮಂತ್ರಿ ನಿರ್ಧಾರಕ್ಕೆ ರಾಜ್ಯ ತಲೆತೂಗಿದ್ದು. ದುಂದುವೆಚ್ಚಕ್ಕೆ ಕಡಿವಾಣ ಅಂದ್ರೆ ಇದಪ್ಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಭಾನುವಾರ ನಡೆದ ‘ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ’ ಉದ್ಘಾಟನಾ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಯವರೇ ರೇಷ್ಮೆ ಗೂಡುಗಳಿಂದ ತಯಾರಾದ ಬೃಹತ್ ಹಾರ, ಮೈಸೂರು ಪೇಟ, ಶಾಲು ಮತ್ತು ಬೆಳ್ಳಿಯ ಸ್ಮರಣಿಕೆಯೊಂದಿಗೆ ಸನ್ಮಾನಿತರಾದರು. ಈ ಮೂಲಕ ತಮ್ಮ ಆದೇಶಕ್ಕೆ ತಾವೇ ಗೋಲಿ ಹೊಡೆದಿದ್ದಾರೆ.
ಹೋಗ್ಲಿ ಇದನ್ನು ಕೊಟ್ಟ ಕೃಷಿ ಸಚಿವ ಬಿಸಿ ಪಾಟೀಲ್ ಅವರಿಗಾದರೂ ಬುದ್ದಿ ಇರಬೇಕಿತ್ತು ತಾನೇ, ಮುಖ್ಯಮಂತ್ರಿಗಳು ಹಾರ ತುರಾಯಿ ನೆನಪಿನ ಕಾಣಿಕೆ ಬೇಡ ಎಂದು ಹೇಳಿದ್ದಾರೆ. ಹೀಗಾಗಿ ಸರಳವಾಗಿ ಕಾರ್ಯಕ್ರಮ ಮುಗಿಸಬಹುದಿತ್ತು ತಾನೇ. ಕೇವಲ ಸಿಎಂ ಮಾತ್ರವಲ್ಲದೆ ದುಬಾರಿ ವೆಚ್ಚದ ಉಡುಗೊರೆಗಳೊಂದಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನೂ ಸನ್ಮಾನಿಸಲಾಗಿದೆ.
ಈ ಹಾರ ತುರಾಯಿ ನೆನಪಿನ ಕಾಣಿಕೆಗೆ ಮಾಡಿರುವ ಖರ್ಚಿನಲ್ಲೇ ಮತ್ತಿಬ್ಬರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬಹುದಿತ್ತು. ಏನು ಮಾಡೋದು, ಈ ಸನ್ಮಾನಕ್ಕೆ ಕೃಷಿ ಸಚಿವರಾಗಲಿ, ಮುಖ್ಯಮಂತ್ರಿಯಾಗ್ಲಿ ತಮ್ಮ ಜೇಬಿನಿಂದ ಖರ್ಚು ಮಾಡೋದಿಲ್ಲ. ಬದಲಾಗಿ ರಾಜ್ಯ ಬೊಕ್ಕಸದಿಂದ ಇದನ್ನು ಭರಿಸಲಾಗಿರುತ್ತದೆ.
Discussion about this post