ಬೆಂಗಳೂರು : ಕೊರೊನಾ ಅಬ್ಬರ ತಗ್ಗಿರುವ ಹಿನ್ನಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿದೆ. ಕೊನೆಯ ಹಂತದಲ್ಲಿ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ತೆರೆಯಲಾಗಿದ್ದು, ನಿರೀಕ್ಷೆಯಂತೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಅಲ್ಲೊಂದು ಇಲ್ಲೊಂದು ಆತಂಕದ ಪ್ರಕರಣ ಬಿಟ್ಟರೆ ಮತ್ಯಾವುದೇ ಭೀತಿ ಕಾಡಿಲ್ಲ.
ಈ ನಡುವೆ 1 ರಿಂದ 5ನೇ ತರಗತಿ ತನಕವೂ ಭೌತಿಕ ತರಗತಿಗಳನ್ನು ಪ್ರಾರಂಭಿಸುವಂತೆ ಒತ್ತಾಯ ಕೇಳಿ ಬಂದಿದ್ದು, ಮಕ್ಕಳನ್ನು ಅತೀ ಹೆಚ್ಚು ಮೊಬೈಲ್ ನಲ್ಲಿ ಕೂರಿಸುವುದೇ ಅಪಾಯಕಾರಿ ಅನ್ನುವ ಅಭಿಪ್ರಾಯ ಪೋಷಕರಿಂದ ಬಂದಿದೆ. ಮತ್ತೆ ಕೆಲ ಪೋಷಕರು ಮೂರನೇ ಅಲೆಯ ಭೀತಿಯೊಂದು ಕರಗಲಿ ಆಮೇಲೆ ಶಾಲೆ ಪ್ರಾರಂಭಿಸುವ ಬಗ್ಗೆ ಚಿಂತಿಸಿದರಾಯ್ತು ಅಂದಿದ್ದಾರೆ.
ಹಾಗಂತ ರಾಜ್ಯ ಶಿಕ್ಷಣ ಇಲಾಖೆ ಸುಮ್ಮನೆ ಕೂತಿಲ್ಲ, ಶಾಲೆ ಪ್ರಾರಂಭಿಸುವ ಕುರಿತಂತೆ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಸಾಧಕ ಬಾಧಕಗಳ ಪರಾಮರ್ಶೆ ನಡೆಸುತ್ತಿದೆ. ಹೀಗಾಗಿ ದಸರಾ ರಜೆ ಬಳಿಕ 1 ರಿಂದ 5ನೇ ತರಗತಿಗಳ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೇ ಸ್ಪಷ್ಟನೆ ಕೊಟ್ಟಿದ್ದು, 1 ರಿಂದ 5ನೇ ತರಗತಿ ಆರಂಭಕ್ಕೆ ಚಿಂತಿಸಲಾಗುತ್ತಿದೆ ಅಂದಿದ್ದಾರೆ.
ಸರ್ಕಾರದ ಈ ನಿರ್ಧಾರಕ್ಕೆ ಪೋಷಕರ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ತರಗತಿ ಪ್ರಾರಂಭಿಸಲು ಶಾಲೆಗಳಲ್ಲಿ ಸಿದ್ಧತೆ ನಡೆಯುತ್ತಿದೆ. ಕೋವಿಡ್ ತಾಂತ್ರಿಕಾ ಸಲಹಾ ಸಮಿತಿಯ ವರದಿ ಬಂದ ಬಳಿಕ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತೇವೆ ಅಂದಿದ್ದಾರೆ.
ಈಗಿನ ಚಿಂತನೆ ಪ್ರಕಾರ ವಾರದಲ್ಲಿ 5 ದಿನ ತರಗತಿ ನಡೆಯಲಿದೆ. ಶನಿವಾರ ಮತ್ತು ಭಾನುವಾರ ಶಾಲೆ ಸ್ವಚ್ಛ ಮತ್ತು ಸ್ಯಾನಿಟೈಸ್ ಮಾಡಲು ನಿರ್ಧರಿಸಲಾಗಿದೆ. ಮಾತ್ರವಲ್ಲದೆ ಮಧ್ಯಾಹ್ನದ ಬಿಸಿಯೂಟ ಪ್ರಾರಂಭಿಸುವ ಬಗ್ಗೆಯೂ ಚರ್ಚೆಗಳು ನಡೆದಿದೆ. ಆದರೆ ಎಲ್ಲವೂ ಕೋವಿಡ್ ತಾಂತ್ರಿಕಾ ಸಲಹಾ ಸಮಿತಿಯ ವರದಿ ಮೇಲೆ ನಿರ್ಧಾರವಾಗಲಿದೆ. ಈ ಸಂಬಂಧ ಅಕ್ಟೋಬರ್ 1 ರಂದು ಸ್ಪಷ್ಟ ಆದೇಶ ಹೊರ ಬೀಳಲಿದೆ.
ಹಾಗಾದ್ರೆ ಸರ್ಕಾರದ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ
Discussion about this post