ಬೆಂಗಳೂರು : ಕೊರೋನಾ ಮೂರನೇ ಅಲೆಯ ಆತಂಕ ದೂರವಾಗಿರುವ ಹಿನ್ನಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿದೆ. ಮುಂದಿನ ಹಂತವಾಗಿ ಅಂಗನವಾಡಿ, LKG, UKG ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಇಂದಿನಿಂದ ಪೂರ್ವ ಪ್ರಾಥಮಿಕ ಭೌತಿಕ ತರಗತಿಗಳು ಪ್ರಾರಂಭಗೊಳ್ಳಲಿದೆ.
ಈ ಸಂಬಂಧ ಈಗಾಗಲೇ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.30ರ ತನಕ ಪೂರ್ವ ಪ್ರಾಥಮಿಕ ತರಗತಿಗಳು ನಡೆಯಲಿದೆ. ಇನ್ನು ಮಕ್ಕಳನ್ನು ತರಗತಿಗೆ ಕಳುಹಿಸಬೇಕಾದರೆ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ.
ಮಕ್ಕಳಿಗೆ ಮನೆಯಿಂದಲೇ ಉಪಹಾರ ಹಾಗೂ ಕುಡಿಯುವ ನೀರು ತರುವಂತೆ ಸೂಚಿಸಲಾಗಿದ್ದು, ಅಗತ್ಯ ಬಿದ್ದಲ್ಲಿ ಶಾಲೆಯಲ್ಲೇ ಬಿಸಿ ನೀರಿನ ವ್ಯವಸ್ಥೆ ಮಾಡಬೇಕಾಗುತ್ತದೆ. ಮನೆಯ ಸದಸ್ಯರಿಗೆ ಸೋಂಕಿನ ಲಕ್ಷಣಗಳಿದ್ದಲ್ಲಿ ಮಗುವನ್ನು ಶಾಲೆಗೆ ಕರೆದುಕೊಂಡು ಬರುವಂತಿಲ್ಲ ಮತ್ತು ಮಗುವಿಗೆ ಸೋಂಕಿನ ಲಕ್ಷಣಗಳಿದ್ದರೆ ಉಳಿದ ಮಕ್ಕಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು.
ಇನ್ನುಳಿದಂತೆ ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿ ಹಾಗೂ ಅಂಗನವಾಡಿಗೆ ಬರೋ ಪೋಷಕರಿಗೆ ಎರಡು ಡೋಸ್ ಲಸಿಕೆ ಕಡ್ಡಾಯ
- ಮಕ್ಕಳನ್ನು 1 ಮೀಟರ್ ಅಂತರದಲ್ಲಿ ಕೂರಿಸಬೇಕು
- ಅಂಗನವಾಡಿಗೆ ಬರೋ ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಬೇಕು.
- ಅಂಗನವಾಡಿಯಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕಾಗಿದ್ದು, ಮಕ್ಕಳಿಗೆ ಸಿಗದಂತೆ ಎಚ್ಚರ ವಹಿಸಬೇಕು.
- ಕೈ ತೊಳೆಯಲು ಸಾಬೂನು ವ್ಯವಸ್ಥೆ
- ಮಕ್ಕಳು ಹಾಗೂ ಅಂಗನವಾಡಿ ಸಿಬ್ಬಂದಿ ಪ್ರತಿ 30 ನಿಮಿಷಕ್ಕೆ ಕೈ ತೊಳೆಯಬೇಕು
- ಕೇಂದ್ರಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಹೀಗೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.
Discussion about this post