ಬೆಂಗಳೂರು : ಘಾಜಿಯಾಬಾದ್ ಮುಸ್ಲಿಂ ವ್ಯಕ್ತಿಗೆ ಥಳಿಸಿದ ವಿಡಿಯೋ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಿದ ಆರೋಪದಡಿಯಲ್ಲಿ ಪ್ರಕರಣ ಎದುರಿಸುತ್ತಿದ್ದ ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಉತ್ತರ ಪ್ರದೇಶ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಅವರಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದ್ದು, ವಿಚಾರಣೆಗೆ ಖುದ್ದು ಹಾಜರಾಗುವಂತೆ ನೊಟೀಸ್ ನೀಡಿದ ಯುಪಿ ಪೊಲೀಸರಿಗೆ ಹಿನ್ನಡೆಯಾಗಿದೆ. ಮನೀಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಜಿ ನರೇಂದರ್ ಏಕ ಸದಸ್ಯ ಪೀಠ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅನುವು ಮಾಡಿಕೊಟ್ಟಿದೆ.
ಯುಪಿ ಪೊಲೀಸರ ನೋಟಿಸ್ ಅನ್ನು CRPC 41Aಯಿಂದ CRPC160ಕ್ಕೆ ಮಾರ್ಪಾಡು ಮಾಡಿದೆ. ಜೊತೆಗೆ ಮನೀಶ್ ಮಹೇಶ್ವರಿ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಷ್ಟೇ ಹೊರತು ಟ್ವಿಟರ್ ಸಂಸ್ಥೆಗೆ ಮನೀಶ್ ಮುಖ್ಯಸ್ಥರಲ್ಲ. ಆಡಳಿತದಲ್ಲೂ ಇವರ ಪಾತ್ರವಿಲ್ಲ. ಈ ಕಾರಣದಿಂದ ಟ್ವಿಟರ್ ಕಂಟೆಂಟ್ ಮೇಲೆ ಇವರಿಗೆ ನಿಯಂತ್ರಣವಿರುವುದಿಲ್ಲ. ಜೊತೆಗೆ ಪ್ರಕರಣದಲ್ಲಿ ಮನೀಶ್ ಆರೋಪಿ ಎಂದು ಪೊಲೀಸರು ಉಲ್ಲೇಖಿಸಿಲ್ಲ. ಈ ಕಾರಣದಿಂದ ತನಿಖೆ ನೆಪದಲ್ಲಿ ಕಿರುಕುಳ ನೀಡಬಾರದು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.
Discussion about this post