ಬೆಂಗಳೂರು : ಬೆಲೆ ಕುಸಿತ, ಅಕಾಲಿಕ ಮಳೆ ಹೀಗೆ ನಾನಾ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತನಿಗೆ ಈ ಚೈನಾ ವೈರಸ್ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
ಮೊದಲೇ ಮಾರುಕಟ್ಟೆ ಸಮಸ್ಯೆ, ಆ ನಡುವೆ ಲಾಕ್ ಡೌನ್ ಕಾರಣದಿಂದ ವ್ಯಾಪಾರವೇ ನೆಲ ಕಚ್ಚಿ ಹೋಗಿದೆ. ಬೆಳೆದ ಪೈರು ಕಟಾವು ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ. ಬೆಳೆದ ತರ್ಕಾರಿ ಖರೀದಿಸುವವರೇ ಇಲ್ಲ ಅಂದ ಮೇಲೆ ಮಾಡುವುದಾದರೂ ಏನು.
ಇಂತಹ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕೆ ಅನುಕೂಲವಾಗುವಂತೆ ಈ ಸಹಮತಿ ಅನ್ನುವ APP ಅನ್ನು ರಾಜ್ಯ ಕೃಷಿ ಇಲಾಖೆ ಅಭಿವೃದ್ಧಿ ಪಡಿಸಿದೆ. ಇ ಸಹಮತಿ APP ಮೂಲಕ ಕೃಷಿ ಉತ್ಪನ್ನಗಳನ್ನು ಎಲ್ಲಿಯಾದರೂ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಜೊತೆಗೆ ಖಾಸಗಿ ಕಂಪನಿಗಳನ್ನು ಈ APP ಮೂಲಕ ಸಂಪರ್ಕಿಸಬಹುದಾಗಿದ್ದು, ಮನೆಯಲ್ಲೇ ಕೂತು ಕೃಷಿ ಉತ್ಪನ್ನವನ್ನು ಮಾರಾಟ ಮಾಡಬಹುದಾಗಿದೆ.
ಇದೇ APP ಮೂಲಕ ರಿಲಯನ್ಸ್, ಪ್ಲಿಪ್ಕಾರ್ಟ್, ಬಿಗ್ ಬಾಸ್ಕೆಟ್, ಸೇರಿದಂತೆ ಆನ್ ಲೈನ್ ವ್ಯವಹಾರ ದೈತ್ಯ ಕಂಪನಿಗಳು ಕೂಡಾ ರೈತರನ್ನು ಸಂಪರ್ಕಿಸಬಹುದು. ರೈತರು ಬೆಳೆದ ಬೆಳೆ ಹಾಗೂ ರೈತನ ವಿವರಗಳನ್ನು ಪರಿಶೀಲನೆ ನಡೆಸಿದ ಕಂಪನಿಗಳು ಕೃಷಿ ಇಲಾಖೆಯ ಕನ್ವೆಂಟ್ ಮ್ಯಾನೇಜರ್ ಮೂಲಕ ರೈತರನ್ನು ಸಂಪರ್ಕಿಸಬಹುದಾಗಿದೆ. ಕಂಪನಿಗಳು ಕೊಡುವ ದರ ರೈತರಿಗೆ ಹಿಡಿಸಿದರೆ ಅನ್ ಲೈನ್ ನಲ್ಲೇ ಖರೀದಿ ವ್ಯವಹಾರ ನಡೆಯುತ್ತದೆ. ಕಂಪನಿಯವರೇ ಬಂದು ಕೃಷಿ ಉತ್ಪನ್ನವನ್ನು ಸಾಗಿಸುತ್ತಾರೆ. ಈ ಮೂಲಕ ಮಧ್ಯವರ್ತಿಗಳ ಕಾಟ, ಸಾಗಾಟ ವೆಚ್ಚದಿಂದ ಪಾರಾಗಬಹುದು. ಮಾತ್ರವಲ್ಲದೆ ಕಂಪನಿಗಳು ಖರೀದಿಸಿದ ಕೆಲವೇ ಕ್ಷಣಗಳಲ್ಲಿ ರೈತರ ಖಾತೆಗೆ ಹಣವನ್ನು ಜಮಾ ಮಾಡುತ್ತವೆ.
ಅಯ್ಯೋ ಇವೆಲ್ಲಾ ಆಗುವ ಹೋಗುವ ಮಾತಲ್ಲ ಅಂದ್ರೆ ಮತ್ತೆ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದೆ ಕ್ಯೂ ನಿಲ್ಲುವ ಅವಕಾಶವೂ ರೈತರಿಗುಂಟು.
Discussion about this post