ಬೆಂಗಳೂರು : ನಮ್ಮ ಜನಪ್ರತಿನಿಧಿಗಳಿಗೆ ಕಾಡುತ್ತಿರುವ ಸಿಡಿ ಭಯ ನೋಡಿದರೆ, ಪಾಪ ಇವರಿಗೆಲ್ಲಾ ನುಡಿದಂತೆ ನಡೆಯುವುದು ಎಷ್ಟು ಕಷ್ಟ ಅಲ್ವಾ ಅನ್ನುವ ಪ್ರಶ್ನೆ ಕಾಡುತ್ತಿದೆ. ಒಂದು ವೇಳೆ ತಡೆಯಾಜ್ಞೆ ತಂದವರಿಗೆ ನಕಲಿ ಸಿಡಿ ಭಯವಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕಿತ್ತು. ನನ್ನ ವಿರುದ್ಧ ನಕಲಿ ಸಿಡಿ ಷಡ್ಯಂತ್ರ ನಡೆದಿದೆ, ಸಿಡಿಕೋರರ ಹೆಡೆಮುರಿ ಕಟ್ಟಿ ಎಂದು ಪೊಲೀಸರಿಗೆ ದೂರು ಕೊಟ್ರೆ ಸಾಕಿತ್ತು. ಆದರೆ ಬದಲಾಗಿ ಇವರೆಲ್ಲಾ ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರುತ್ತಿರುವುದನ್ನು ನೋಡಿದರೆ ನಡೆ ನುಡಿಯ ಬಗ್ಗೆ ಸಣ್ಣದೊಂದು ಅನುಮಾನವಿದೆ.
ಜಾರಕಿಹೊಳಿಯ ಸಿಡಿ ಬಹಿರಂಗವಾದ ಬೆನ್ನಲ್ಲೇ ಮಿತ್ರಮಂಡಳಿಯಲ್ಲಿ ಗುರುತಿಸಿಕೊಂಡವರು ತಡೆಯಾಜ್ಞೆ ತಂದಿದ್ದರು. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಚಿವರಾಗಿದ್ದ ಡಿವಿ ಸದಾನಂದ ಗೌಡ ಸಿಡಿ ವಿಷಯದಲ್ಲಿ ತಡೆಯಾಜ್ಞೆ ತಂದಿದ್ದರು. ಇದೀಗ ಶಾಸಕ ರೇಣುಕಾಚಾರ್ಯ ಸರದಿ.
ಸಿ.ಡಿ ಒಂದನ್ನು ಬಳಸಿಕೊಂಡು ತಮ್ಮ ವಿರುದ್ಧ ವರದಿ ಪ್ರಕಟಿಸಲು ಸಂಚು ನಡೆದಿದ್ದು, ಇದು ನನ್ನ ವರ್ಚಸ್ಸಿಗೆ ಧಕ್ಕೆ ತರಲಿದೆ ಎಂದು ಬೆಂಗಳೂರು ನಗರದ 20ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಜುಲೈ 26ರಂದು ಅರ್ಜಿ ಸಲ್ಲಿಸಿದ್ದರು. ಈ ಪ್ರಕಾರ ನ್ಯಾಯಾಲಯವು ಜುಲೈ 28ರಂದು ಮಧ್ಯಂತರ ಪ್ರತಿಬಂಧಕಾಜ್ಞೆ ನೀಡಿದೆ.
ಸಿ.ಡಿ ಆಧಾರದಲ್ಲಿ ಮಾನಹಾನಿಕರ ವರದಿ ಪ್ರಕಟಿಸುವ ಸಾಧ್ಯತೆ ಇದೆ. ಜುಲೈ 21ರಂದು ಕೆಲವು ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ ಎಂದು ರೇಣುಕಾಚಾರ್ಯ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ಪತ್ರಿಕೆಗಳು, ಸುದ್ದಿ ವಾಹಿನಿಗಳು, ವೆಬ್ ಸೈಟ್, ಫೇಸ್ ಬುಕ್ ಪುಟಗಳು, ಯೂ ಟ್ಯೂಬ್ ಚಾನೆಲ್ಗಳು, ಟ್ವಿಟರ್ ಸೇರಿದಂತೆ 71 ಮಾಧ್ಯಮ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅಚ್ಚರಿ ಅಂದ್ರೆ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಾರ್ತಾ ಮಾಹಿತಿ ಬ್ಯೂರೊ (ಪಿಐಬಿ) ಅನ್ನೂ ಪ್ರತಿವಾದಿ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಪಿಐಬಿ ಸರ್ಕಾರಿ ಸಂಸ್ಥೆಯಾಗಿದ್ದು, ಸಿಡಿಯಂತಹ ವಿಚಾರದಲ್ಲಿ ಅದು ತಲೆ ಹಾಕುವುದೇ ಇಲ್ಲ.
Discussion about this post