ರಾಜಭವನದೊಂದಿಗೆ ಸಂಘರ್ಷಕ್ಕೆ ನಿರ್ಧರಿಸಿದ ಸಿದ್ದರಾಮಯ್ಯ ಸರ್ಕಾರ
ರಾಜ್ಯದಲ್ಲಿ ಸಿಬಿಐ ತನಿಖಾ ತಂಡಕ್ಕೆ ಮುಕ್ತ ಅನುಮತಿ ನೀಡಿರುವ ಅಧಿಸೂಚನೆಯನ್ನು ವಾಪಸ್ ಪಡೆಯಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಯಾವುದೇ ಪತ್ರಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಉತ್ತರಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಯಾವುದೇ ಪತ್ರ ಬರೆದರೂ ಸಂಪುಟ ಗಮನಕ್ಕೆ ತರಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ನೇರವಾಗಿ ರಾಜ್ಯಪಾಲರಿಗೆ ಉತ್ತರಿಸದಂತೆ ನಿರ್ಣಯ ಮೂಲಕ ಮುಖ್ಯಕಾರ್ಯದರ್ಶಿಗೆ ತಿಳಿಸಲಾಗಿದೆ.
ರಾಜ್ಯಪಾಲರ ಪತ್ರವನ್ನು ನಿಯಮ ಪ್ರಕಾರ ಸರ್ಕಾರದ ಮುಖ್ಯಕಾರ್ಯದರ್ಶಿ ಸಂಪುಟದ ಗಮನಕ್ಕೆ ತರಬೇಕೆಂದು ನಿರ್ಣಯ ಅಂಗೀಕರಿಸಲಾಗಿದೆ.
ಕಾರ್ಯದರ್ಶಿ ಬದಲು ಸಂಪುಟ ಮೂಲಕ ರಾಜ್ಯಪಾಲರ ಪತ್ರಗಳಿಗೆ ಸರ್ಕಾರದ ಉತ್ತರ ನೀಡಲು ನಿರ್ಧರಿಸಲಾಗಿದ್ದು ಅಗತ್ಯವಿದ್ದರಷ್ಟೇ ಉತ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.