ಬೆಂಗಳೂರು : ರಾಜ್ಯದಲ್ಲಿ ಜನ ಸಂಕಷ್ಟದಲ್ಲಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಡೆಲ್ಲಿಯಲ್ಲಿ ಸೇಫ್ ಗೇಮ್ ಆಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಜನ ನೆರೆ ಹಾವಳಿಯಿಂದ ತತ್ತರಿಸಿ ಹೋಗಿದಾರೆ. ಮತ್ತೊಂದು ಕಡೆ ಕರಾವಳಿ ಸೇರಿದಂತೆ ಅನೇಕ ಭಾಗಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಾದ ಸರಕಾರ ಸರ್ಕಸ್ ಆಡುತ್ತಿದೆ.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಸವರಾಜ್ ಬೊಮ್ಮಾಯ. ಕರ್ನಾಟಕಕ್ಕಿಂತ ಹೆಚ್ಚು ದಿನಗಳನ್ನು ದೆಹಲಿಯಲ್ಲಿ ಕಳೆದಿದ್ದಾರೆ, ಉತ್ತರ ಕನ್ನಡ ಪ್ರವಾಸವೊಂದು ಬಿಟ್ಟರೆ ಉಳಿದ ದಿನ ಅವರು ದೆಹಲಿಯಿಂದಲೇ ಆಡಳಿತ ನಡೆಸುತ್ತಿದ್ದಾರೆ. ಹಾಗಂತ ಇದು ಬೊಮ್ಮಾಯಿಯವರ ತಪ್ಪಲ್ಲ, ಜನಾದೇಶ ಪಡೆದು ಸಿಎಂ ಆಗಿರುತ್ತಿದ್ರೆ ಅವರು ನಿರೀಕ್ಷೆ ಪಟ್ಟಂತೆ ಕ್ಯಾಬಿನೆಟ್ ಕಟ್ಟಬಹುದಿತ್ತು. ಇದು ಹೈಕಮಾಂಡ್ ಕೃಪಾಕಟಾಕ್ಷದ ಸಿಎಂ ಪದವಿ, ಹೀಗಾಗಿ ಹೈಕಮಾಂಡ್ ಮಾತಿನಂತೆ ಸಂಪುಟ ರಚನೆಯಾಗಬೇಕಿದೆ.
ಇನ್ನು ಚುನಾವಣೆ ಹತ್ತಿರದಲ್ಲಿರುವ ಸಂದರ್ಭದಲ್ಲಿ ಅಳೆದು ತೂಗಿ ಮಂತ್ರಿ ಪದವಿಯನ್ನು ಹಚ್ಚಬೇಕು. ಒಂದು ವೇಳೆ ಬಂಡಾಯ ಗಾಳಿ ಬೀಸಲಾರಂಭಿಸಿದ್ರೆ ಕಷ್ಟ ಅನ್ನುವುದು ಹೈಕಮಾಂಡ್ ಗೂ ಅರಿವಿದೆ. ಹೀಗಾಗಿ ಸಂಪುಟ ವಿಸ್ತರಣೆ ವಿಳಂಭವಾಗುತ್ತಿದೆ. ಆದರೆ ನೆರೆ, ಕೊರೋನಾ ಕಾಲದಲ್ಲಿ ಇಷ್ಟೆಲ್ಲಾ ವಿಳಂಭ ಮಾಡಬೇಕಾ, ಬದಲಾಗಿ ಮೋದಿಯ ಕನಸಿನಂತೆ ಡಿಜಿಟಲ್ ತಂತ್ರಜ್ಞಾನ ಬಳಸಿ ಸಭೆಗಳನ್ನು ನಡೆಸಿ ಕ್ಯಾಬಿನೆಟ್ ವಿಸ್ತರಣೆ ಮಾಡಬಹುದಲ್ವ. ಅದಕ್ಕೆ ಬೊಮ್ಮಾಯಿಯವರನ್ನು ದೆಹಲಿಗೆ ಕರೆಸಿಕೊಳ್ಳುವ ಅಗತ್ಯವೇನಿದೆ.
ಲಭ್ಯ ಮಾಹಿತಿಗಳ ಪ್ರಕಾರ ಅಶೋಕ್ ಅವರನ್ನು ಡಿಸಿಎಂ ಮಾಡಲು ಬೊಮ್ಮಾಯಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ. ಈ ನಡುವೆ ಇಂದು ಬೆಂಗಳೂರಿಗೆ ಹಿಂತಿರುಗಬೇಕಾಗಿದ್ದ ಬಸವರಾಜ್ ಬೊಮ್ಮಾಯಿ ತಮ್ಮ ಪ್ರಯಾಣ ರದ್ದುಗೊಳಿಸಿದ್ದಾರೆ. ಇಂದು ಎರಡು ಸಲ ವಿಮಾನ ಟಿಕೆಟ್ ರದ್ದುಗೊಳಿಸಲಾಗಿರುವುದನ್ನು ನೋಡಿದರೆ, ಸಂಪುಟ ವಿಸ್ತರಣೆ ಬಿಜೆಪಿ ದೊಡ್ಡ ಅನಾಸಿನ್ ಆಗಿದೆ ಅನ್ನುವುದು ಸ್ಪಷ್ಟ.
Discussion about this post