ಬೆಂಗಳೂರು : ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ನಟ ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ. ಆಸ್ಪತ್ರೆಯಿಂದ ಅಧಿಕಕೃತ ಹೇಳಿಕೆಯೊಂದು ಬರಬೇಕಾಗಿದೆ ಅನ್ನುವುದನ್ನು ಬಿಟ್ಟರೆ, ಅವರನ್ನು ಕಳುಹಿಸಿಕೊಡುವ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ.
ಈಗಾಗಲೇ ಅಂಗಾಂಗ ದಾನ ಪ್ರಕ್ರಿಯೆಗಳು ಕೊನೆಯ ಹಂತ ತಲುಪಿದ್ದು, ನಾಳೆ ಬೆಳಗ್ಗಿನ ಹೊತ್ತಿನ ಸಂಚಾರಿ ವಿಜಯ್ ಅಂಗಾಂಗ ಹಲವರ ಬದುಕಿನಲ್ಲಿ ಬೆಳಕಾಗಲಿದೆ. ಅದರಲ್ಲೂ ಇಬ್ಬರಿಗೆ ದೃಷ್ಟಿ ಭಾಗ್ಯ ಸಿಗಲಿದೆ.
ಈ ನಡುವೆ ಅಣ್ಣನ ಸಾವಿಗೆ ನವೀನ್ ಕಾರಣ ಎಂದು ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ಕುಮಾರ್ ಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನ್ನ ಸಹೋದರ ವಿಜಯ್ ನನ್ನು ಕೂರಿಸಿಕೊಂಡು ಜೆಪಿ ನಗರ 7ನೇ ಹಂತದ ರಸ್ತೆಯಲ್ಲಿ ವೇಗವಾಗಿ, ನಿರ್ಲಕ್ಷ್ಯದಿಂದ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದಾರೆ. ಹೀಗಾಗಿ ಬೈಕ್ ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸಂಚಾರಿ ವಿಜಯ್ ತಲೆ ಮತ್ತು ತೊಡೆಗೆ ತೀವ್ರ ಗಾಯವಾಗಿದೆ ಹೀಗಾಗಿ ಅಣ್ಣನ ಸಾವಿಗೆ ಕಾರಣನಾದ ನವೀನ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಇದೀಗ ನವೀನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ನವೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ತನಿಖೆ ವಿಳಂಭವಾಗಲಿದೆ.
ಇನ್ನು ಶನಿವಾರ ರಾತ್ರಿ ಅಪಘಾತವಾದ ತಕ್ಷಣ ಗಾಯಗೊಂಡಿದ್ದ ನವೀನ್ ಎದ್ದು ಬಂದು ವಿಜಯ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ವಿಜಯ್ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಸ್ನೇಹಿತರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸ್ನೇಹಿತರು ವಿಜಯ್ ರನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.
Discussion about this post